ದೊಡ್ಡಬಳ್ಳಾಪುರ; ಎಂಇಎಸ್ (MES) ಮತ್ತು ಶಿವಸೇನೆಯನ್ನು ನಿಷೇಧಿಸಬೇಕು ಹಾಗೂ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮಹದೇವರ ಮೇಲೆ ಹಲ್ಲೆ ಮಾಡಿರುವ ಪುಂಡರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ನಗರದ ತಾಲೂಕು ಆಫೀಸ್ ಸರ್ಕಲಿನಲ್ಲಿ ಪ್ರತಿಭಟನೆ ಮತ್ತು ಪ್ರತಿಕೃತಿ ದಹನ ಮಾಡಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಮುಖಂಡರಾದ ಅಗ್ನಿ ವೆಂಕಟೇಶ್, ಮರಾಠಿ ಪುಂಡರು ಇಲ್ಲಿನ ಅನ್ನ, ನೀರು, ಉದ್ಯೋಗ, ಪಡೆದು ಕನ್ನಡಿಗರಿಗೆ ಹಲ್ಲೆ ಮಾಡುವುದು ಮತ್ತು ಹೇಳಿಕೆ ಕೊಡುವುದು ಖಂಡನೀಯ. ಇಂತಹವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ
ಎಂ. ನಾಗರಾಜ್ ಮಾತನಾಡಿ, ಬೆಳಗಾವಿ ಕರ್ನಾಟಕದ ಒಂದು ಅವಿಭಾಜ್ಯ ಅಂಗವಾಗಿದೆ. ಮಹಾಜನ್ ವರದಿ ಕೋರ್ಟಿನಲ್ಲಿ ಇದ್ದರೂ ಸಹ ಮರಾಠಿ ಪುಂಡರು ಸುಪ್ರೀಂಕೋರ್ಟಿಗೂ ಸಹ ಗೌರವ ನೀಡದೆ ಕನ್ನಡಿಗರ ಸ್ವಾಭಿಮಾನ ಧಕ್ಕೆಯಾಗುವಂತೆ ಹೇಳಿಕೆಗಳನ್ನು ನೀಡುವುದು, ಅಮಾಯಕರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ಅವರ ಹವ್ಯಾಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಗೆ ನಡೆದ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಮಹದೇವ್ ಹುಕ್ಕೇರಿ ಮೇಲೆ ಹಲ್ಲೆ ಮಾಡಿರುವ ಮರಾಠಿ ಪುಂಡರಿಗೆ ಕಾನೂನು ರೀತಿ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕು.. ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ರಾಜ್ಯ ಸರ್ಕಾರದವರು ಎಚ್ಚರಿಕೆಯನ್ನು ನೀಡಬೇಕೆಂದರು. ಅಲ್ಲದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.. ಇಲ್ಲವಾದಲ್ಲಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹೋರಾಟವನ್ನು ಮಾಡುತ್ತೇವೆ ಎಚ್ಚರಿಕೆ ನೀಡಿದರು.
ಪ್ರತಿಭಟನೆ ನಂತರ ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆ ತಾಲೂಕ ಅಧ್ಯಕ್ಷ ಶಶಿಧರ್ ಸಿ., ಕೆ. ಮುನಿಯಪ್ಪ, ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್ ಕೆ., ಮಹಿಳಾ ಅಧ್ಯಕ್ಷರಾದ ಮುನಿರತ್ನಮ್ಮ, ಲಕ್ಷ್ಮಿ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಸುರೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಜತ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ, ತಾಲೂಕು ಸಂಚಾಲಕರಾದ ಮಾದೇವ್, ಶಿವಪ್ರಸಾದ್, ವಿಶ್ವನಾಥ್, ಕಾರ್ಮಿಕ ಘಟಕದ ಸದಸ್ಯಗಳಾದ ಶೆಟ್ಟರ್, ಮಂಜುನಾಥ್ ಮತ್ತಿತರರಿದ್ದರು.