ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ಸ್ವಾಮಿ (Bhoganandeeswara swamy) ದೇವಸ್ಥಾನದಲ್ಲಿ ಗುರುವಾರ ಸಹಸ್ರಾರು ಸಂಖ್ಯೆಯ ಭಕ್ತರ ಶ್ರದ್ಧಾಭಕ್ತಿಯ ಹರ್ಷೋದ್ಗಾರಗಳ ಮಧ್ಯೆ ಜೋಡಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಮಧ್ಯಾಹ್ನ 12.30ರ ಸುಮಾರಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ದೊಡ್ಡ ರಥದಲ್ಲಿ ಭೋಗನಂದೀಶ್ವರಸ್ವಾಮಿ ಮತ್ತು ಗಿರಿಜಾಂಬ ಹಾಗೂ ಚಿಕ್ಕರಥದಲ್ಲಿ ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಬಣ್ಣದ ಪತಾಕೆ, ಹೂವುಗಳಿಂದ ಶೃಂಗಾರ ಗೊಂಡ ರಥಗಳನ್ನು ಭಕ್ತರು ದೇವಸ್ಥಾನದ ಸುತ್ತ ಎಳೆದರು. ಈ ವೇಳೆ ಜಾತ್ರೆಯಲ್ಲಿದ್ದ ಭಕ್ತರು ರಥಗಳ ಮೇಲೆ ಬಾಳೆ ಹಣ್ಣು ತೂರಿ ಧನ್ಯತಾ ಭಾವ ಮೆರೆದರು.
ಈ ವೇಳೆ ಸುದ್ದಿಗಾರರೊಂದಿಗೆ ಸಚಿವ ಡಾ.ಎಂಸಿ.ಸುಧಾಕರ್ ಮಾತನಾಡಿ, ಕಳೆದ ವರ್ಷವೂ ಸಹ ರಥೋತ್ಸವದಲ್ಲಿ ಬಾಗಿಯಾಗಿದ್ದೆ, ಈ ಭಾರಿಯೂ ಬಾಗಿಯಾಗಿ ರಾಜ್ಯದ ಜನರ ಹೆಸರಲ್ಲಿ ಶ್ರೀ ಭೋಗನಂದೀಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಜಿಲ್ಲೆಯಲ್ಲಿ ಕಳೆದ ಬಾರಿ ಮಳೆ ಬಂದಿತ್ತು ಆದರೆ ಆ ಮಳೆ ಸಾಕಾಗಿಲ್ಲ.
ಈ ಬಾರಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಉತ್ತಮ ಮಳೆ ಮತ್ತು ಬೆಳೆಯಾಗಿ ಅನ್ನದಾತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯಲಿ. ಸರ್ವರೂ ಸಣತೋಷದಿಂದ ಇರಲಿ ಎಂದು ಬೇಡಿ ಕೊಂಡಿದ್ದೇನೆ ಎಂದರು.
ಮಹಾಶಿವರಾತ್ರಿ ಪ್ರಯುಕ್ತ ಬುಧವಾರದಿಂದಲೇ ದೇವಸ್ಥಾನದಲ್ಲಿ ದಿನವೀಡಿ ವಿಶೇಷ ಅಭಿಷೇಕ ಮತ್ತು ಹವನ ಹೋಮ, ಹಂಸ ವಾಹನೋತ್ಸವ, ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕ, ಕಾಶಿಯಾತ್ರೆ, ಹರಿಕಥೆ, ಭಜನೆ, ಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.
ಗುರುವಾರ ಬೆಳಗಿನ ಜಾವ ಮೂರು ಮತ್ತು ನಾಲ್ಕನೇ ಯಾಮದ ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕಗಳನ್ನು ನೇರವೇರಿಸಲಾಯಿತು.
ಶಿವರಾತ್ರಿ ಉಪವಾಸ ನಿರತ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.
ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಾಂಗಣ ಮತ್ತು ತಮಿಳುನಾಡಿನಿಂದ ಕೂಡ ನಂದಿ ಜಾತ್ರೆಗೆ ಭಕ್ತರ ದಂಡೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿ ಕೊಟ್ಟು, ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಜಾತ್ರೆಗೆ ಬಂದವರ ಹಸಿವು, ದಣಿವು ದೂರ ಮಾಡಲು ಅನೇಕ ಕಡೆಗಳಲ್ಲಿ ಭಕ್ತರು ವಾಹನಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಉಪಾಹಾರ ವಿತರಣೆ ಮಾಡುತ್ತಿದ್ದ ದೃಶ್ಯಗಳು ಗೋಚರಿಸಿದವು.
ಭರ್ಜರಿ ವ್ಯಾಪಾರ
ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನೀಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು.
ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್‌ಕ್ರೀಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು.
ಭರಪೂರ ಮನರಂಜನೆ
ಜಾತ್ರೆಯ ಪರಿಸರದಲ್ಲಿಯೇ ತಲೆ ಎತ್ತಿದ್ದ ಮನರಂಜನಾ ತಾಣ ಬಹುತೇಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಜಾತ್ರೆಗೆ ಬಂದವರು ಜಾಯಿಂಟ್ ವ್ಹೀಲ್, ರೈಲು ಸವಾರಿ, ತೊಟ್ಟಿಲು, ಜಾರುಬಂಡೆ ಸೇರಿದಂತೆ ವಿವಿಧ ಮನರಂಜನಾ ಆಟಗಳಲ್ಲಿ ಮೈಮರೆತು, ಕೇಕೆ ಹಾಕುತ್ತಿದ್ದ ದೃಶ್ಯಗಳು ಗೋಚರಿಸಿದವು.
ಈ ವೇಳೆ ಶಾಸಕ ಪ್ರದೀಪ್ ಈಶ್ವರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಗ್ಯಾರಂಟಿ ಅನುಸ್ಟಾನಗಳ ಸಮಿತಿ ಜಿಲ್ಲಾಧ್ಯಕ್ಷ ಯಲುವಹಳ್ಳಿರಮೇಶ್,ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್.ಜಿ.ಟಿ,ನಿಟ್ಟಾಲಿ, ಉಪವಿಭಾಗಾಧಿಕಾರಿ ಡಿ.ಎಚ್,ಅಶ್ವಿನ್, ತಹಸೀಲ್ದಾರ್ ಅನಿಲ್, ಮಾಜಿಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಮುನೇಗೌಡ,ರಾಜಾಕಾಂತ್, ಆವುಲರೆಡ್ಡಿ,ಹರೀಶ್,ಮುರಳಿ, ಅರವಿಂದ್,ಲಕ್ಷ್ಮೀಪತಿ, ಚೇತನ್ ಮತ್ತಿತರರು ಇದ್ದರು.