ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇತ್ತೀಚಿಗೆ ಒಂದರ ನಂತರ ಒಂದು ಎಂಬಂತೆ ಹಲವು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹಿಂದೂ ವಿರೋಧಿಗಳಿಗೆ ಸೆಡ್ಡು ಹೊಡೆದಿದ್ದರೆ, ಹಿಂದೂ ಧರ್ಮವನ್ನು ದತ್ತು ಪಡೆದಂತೆ ವರ್ತಿಸುವ ಬಿಜೆಪಿಗರಲ್ಲಿ ಆತಂಕವನ್ನು ಸೃಷ್ಠಿಸುತ್ತಿದ್ದಾರೆ.
ಮಹಾಕುಂಭ ಮೇಳದ (Maha Kumbha Mela) ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ವ್ಯತಿರಿಕ್ತ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಡಿಕೆ ಶಿವಕುಮಾರ್ (DK Shivakumar) ತಮ್ಮ ಪತ್ನಿ ಸಮೇತ ಕುಂಭಮೇಳಕ್ಕೆ ಹೋಗಿ, ಪುಣ್ಯಸ್ನಾನ ಮಾಡಿ ಬಂದಿದ್ದರು.

ಇದರ ಬೆನ್ನಲ್ಲೇ ನಿನ್ನೆ ಶಿವರಾತ್ರಿ ಅಂಗವಾಗಿ ಕೊಯಮತ್ತೂರಿನಲ್ಲಿನ ಸದ್ಗುರು ಅವರ ಇಶಾ ಫೌಂಡೇಶನ್‌ನ (Isha Foundation) ಮಹಾಶಿವರಾತ್ರಿ (Maha Shivaratri) ಉತ್ಸವದಲ್ಲಿ ಭಾಗಿಯಾಗಿದ್ದರು.
ಅದೇ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ (Amith Shah) ಕೂಡ ಇದ್ದರು. ಇದು ಕಾಂಗ್ರೆಸ್ ನಾಯಕರ ತಳಮಳಕ್ಕೆ ಕಾರಣವಾಗಿದೆ.
ಮಹಾ ಶಿವರಾತ್ರಿ ಉತ್ಸವದಲ್ಲಿ ಡಿಕೆಶಿ ಪಾಲ್ಗೊಂಡಿದ್ದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿವಿ ಮೋಹನ್ ಅಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಯಾರು ಎಂದವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕೆಲ ಖಾಸಗಿ ಸುದ್ದಿವಾಹಿನಿಗಳು ಡಿಕೆ ಶಿವಕುಮಾರ್ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ತಡೆ, ಡಿಕೆ ಶಿವಕುಮಾರ್ ಬಿಜೆಪಿ ಸೇರುತ್ತಾರೇ.. ಎಂಬಂತೆ ವರದಿಗಳ ಮೇಲೆ ವರದಿ ಮಾಡುತ್ತಾ.. ಬಿಜೆಪಿ ಮುಖಂಡರ ಅಭಿಪ್ರಾಯ ಪಡೆಯುತ್ತಾ.. ರಾಜ್ಯ ಸರ್ಕಾರ ಬಿದ್ದೇ ಹೋಗಲಿದೆ, ರಾಜಕೀಯ ಪರ್ವ ಆರಂಭವಾಗಲಿದೆ ಎಂಬಂತೆ ಕಿರುಚಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಡಿಕೆ ಶಿವಕುಮಾರ್ ಅವರು ಸದ್ಗುರು ಸನ್ನಿಧಿಯ ಶಿವರಾತ್ರಿ ಅನುಭವದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಡಿಯೋ ಪೋಸ್ಟ್ ಮಾಡಿದ್ದಾರೆ
ಇಶಾದಲ್ಲಿ ಭಕ್ತಿ, ಭಾವ ಪರವಶ! 🔱✨
ಎಲ್ಲೆಲ್ಲೂ ಶಿವನಾಮದ ಝೇಂಕಾರ,
ಆದಿಯೋಗಿ ಸನ್ನಿಧಿಯಲ್ಲಿ ಆತ್ಮ ಸಾಕ್ಷಾತ್ಕಾರ!
ಭಸ್ಮಭೂಷಿತನ ಸ್ಮರಣೆಯಲ್ಲಿ ಮಿಂದೆದ್ದರು ಜನ, ನಟರಾಜನ ನಾದದಲ್ಲಿ ಸಮ್ಮಿಳಿತವಾಯಿತು ತನು-ಮನ! ಎಂದು ಡಿಕೆ ಶಿವಕುಮಾರ್ ಬರೆಯುವ ಮೂಲಕ ರಾಜಕೀಯ ವಲಯದಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪವನ್ನು ಸುರಿದಿದ್ದಾರೆ.