ಬೆಂಗಳೂರು; ಇತ್ತೀಚಿಗೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನದ ಕುರಿತು ಹುಟ್ಟಿಕೊಂಡಿರುವ ವದಂತಿಗಳಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ, ಮಾತನಾಡಿದ ಅವರು, ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವಿಚಾರವಾಗಿ ತಾವು ಬಿಜೆಪಿಗೆ ಹತ್ತಿರ ಆಗುತ್ತಿರುವುದಾಗಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಐ ಯಾಮ್ ಹಿಂದೂ ಐಸೇ.. ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ.
ಈಶಾ ಫೌಂಡೇಶನ್ ಸದ್ಗುರು ನನ್ನ ಮನೆಗೆ ಬಂದು ಶಿವರಾತ್ರಿ ಕಾರ್ಯಕ್ರಮದಲ್ಲಿ ನನ್ನ, ನನ್ನ ಕುಟುಂಬವನ್ನು ಭಾಗವಹಿಸಲು ಮನವಿ ಮಾಡಿದ್ದಾರೆ, ನನ್ನ ಮಗಳು ಹೋಗಿದ್ಲಂತೆ ಇವತ್ ನಾನು ಹೋಗ್ತಿನಿ.. ಆಗ್ಲೇ ಸಾಮಾಜಿಕ ಜಾಲತಾಣದಲ್ಲಿ ನಾ ಬಿಜೆಪಿಗಡ ಹತ್ತಿರವಾಗಿದ್ದೇನೆ ಅಂತಾ ಇದ್ದಾರೆ..
ಕುಂಭ ಮೇಳಕ್ಕೆ ಹೋಗಿದ್ದು ನನ್ನ ನಂಬಿಕೆ. ಎಲ್ಲಾ ಧರ್ಮದ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ನನ್ನ ಮೇಲೆಯೂ ಅಪಾರ ಒಲುವು ಇಟ್ಟುಕೊಂಡಿದ್ದಾರೆ.. ಇಂತಹ ಊಹಾಪೋಹಗಳು ನನ್ನ ಹತ್ತಿರ ಸುಳಿಯುವುದೂ ಬೇಡ ಎಂದರು
ಇನ್ನು ನಿನ್ನೆ ಹೊಸದಿಲ್ಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಹಾಗೂ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಕುರಿತು ಪ್ರತಿಕ್ರಿಯೆ ನೀಡಿ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅಗತ್ಯವಿರುವ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ.
ಇದಲ್ಲದೆ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾಯಿಸುವ ಸಂಬಂಧ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ.
ನೀರಾವರಿ ಯೋಜನೆಗಳ ಕುರಿತು ಮತ್ತೊಂದು ಸುತ್ತಿನ ಚರ್ಚೆಗೆ ಮಾರ್ಚ್ 18ಕ್ಕೆ ಸಮಯ ಕೇಳಿದ್ದೇವೆ. ಈ ಉದ್ದೇಶಿತ ಯೋಜನೆಗಳಿಂದ ವಿಜಯಪುರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ.
ದಕ್ಷ ನೀರಾವರಿ ನಿರ್ವಹಣೆಗಾಗಿ ಸ್ವಯಂಚಾಲಿತ ಅಣೆಕಟ್ಟುಗಳು ಮತ್ತು ಕಾಲುವೆ ವ್ಯವಸ್ಥೆಗಳಿಗಾಗಿ ಶೀಘ್ರದಲ್ಲೇ ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ.
ಮನೆಯಲ್ಲಿ ಕುಳಿತುಕೊಳ್ಳಲು ಅಧ್ಯಕ್ಷರನ್ನಾಗಿ ನನ್ನನ್ನು ಮಾಡಿಲ್ಲ ಯಾವುದೇ ಸ್ಥಾನದಲ್ಲಿ ಇದ್ದರೂ ನಾಯಕತ್ವ ವಹಿಸುತ್ತೇನೆ. ನನಗೆ ಫೇಸ್ ಇದೆ, ವೈಬ್ರೇಷನ್, ಶಕ್ತಿಯೂ ಕೂಡ ಇದೆ. ಹಾಗಾಗಿ ದೆಹಲಿ, ಬಿಹಾರ, ಕೇರಳ, ತಮಿಳುನಾಡು ಹೀಗೆ ಅನೇಕ ರಾಜ್ಯಗಳಿಗೂ ನನ್ನನ್ನು ಕರೆಯುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.