Site icon Harithalekhani

Doddaballapura: ಶ್ರದ್ಧಾ ಭಕ್ತಿಗಳಿಂದ ಮಹಾಶಿವರಾತ್ರಿ ಆಚರಣೆ

Celebrate Mahashivratri with devotional devotions

Celebrate Mahashivratri with devotional devotions

ದೊಡ್ಡಬಳ್ಳಾಪುರ: ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು (Maha Shivaratri) ಶ್ರದ್ದಾ ಭಕ್ತಿ, ಸಡಗರದಿಂದ ಆಚರಿಸಲಾಯಿತು. ವಿವಿಧ ಶಿವನ ದೇವಾಲಯಗಳಿಗೆ ನೂರಾರು ಭಕ್ತರು ತೆರಳಿ, ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಗಿನಿಂದ ಅಭಿಷೇಕ ವಿಶೇಷ ಪೂಜಾ ಕಾರ್‍ಯಕ್ರಮಗಳು ಜರುಗಿದವು. ಹಲವಾರು ದೇವಾಲಯಗಳಲ್ಲಿ ರುದ್ರಾಭಿಷೇಕ ,ಕ್ಷೀರಾಭಿಷೇಕ, ರುದ್ರಹೋಮಗಳು ನಡೆದವು. ಸಂಜೆ ಮನೆಗಳಲ್ಲಿ ಪೂಜೆ, ಫಲಹಾರ ಸೇವನೆ ಆಚರಣೆಗಳು ನಡೆದವು.

ನಗರದ ಬಸವಭವನದ ಬಳಿಯ ಸ್ವಯಂಭುಕೇಶ್ವರ (ಸೋಮೇಶ್ವರ)ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪ್ರಾತಃಕಾಲ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಅಲಂಕಾರ ನಡೆದವು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಶಿವಭಕ್ತರು ಪಾಲ್ಗೊಂಡು ಸಂಪನ್ನಗೊಂಡರು.

ನಗರದ ಶ್ರೀ ನಗರೇಶ್ವರ ದೇವಾಲಯದಲ್ಲಿ ಕೈಲಾಸದ ಅಲಂಕಾರದಲ್ಲಿ ಶಿವನ ಮೂರ್ತಿ ಹಾಗೂ ದೇವತಾ ಮೂರ್ತಿಗಳಿಗೆ ಮುತ್ತಿನ ಅಲಂಕಾರ ಮಾಡಲಾಗಿತ್ತು. ಚಿಕ್ಕಪೇಟೆಯ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಪಾರಾಯಣ ನಡೆಯಿತು. ತೇರಿನ ಬೀದಿಯಲ್ಲಿರುವ ಚಂದ್ರಮೌಳೇಶ್ವರ ದೇವಾಲಯ, ಶ್ರೀಕಂಠೇಶ್ವರ ದೇವಾಲಯ, ಶ್ರೀನಗರದ ಮಲೈ ಮಹದೇಶ್ವರ ದೇವಾಲಯ, ರುಮಾಲೆ ವೃತ್ತದ ಶ್ರೀ ಗಣಪತಿ ದೇವಾಲಯ, ಕುಚ್ಚಪ್ಪನಪೇಟೆಯ ಕಾಳಿಕ ಕಮಟೇಶ್ವರ, ಮುಖ್ಯರಸ್ತೆಯ ಬಸವಣ್ಣ ದೇವಾಲಯ, ಚಿಕ್ಕಪೇಟೆಯ ವೀರಭದ್ರ ಹಾಗೂ ಬಸವಣ್ಣ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಇತಿಹಾಸ ಪ್ರಸಿದ್ದ ಮುಕ್ಕಣ್ಣೇಶ್ವರ ದೇವಾಲಯದಲ್ಲಿ ಶಿವಲಿಂಗ ಮೂರ್ತಿಗೆ ಬೆಳಗಿನಿಂದಲೇ ಅಭಿಷೇಕ, ಅಲಂಕಾರ ಮಾಡಲಾಗಿತ್ತು.

ಹಣಬೆ ಶ್ರೀ ಸಿದ್ದರಾಮ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಸಮೀಪದ ತೋಪನಯ್ಯಸ್ವಾಮಿ (ಶಿವ) ದೇವಸ್ಥಾನದ ಹೊಸಹಳ್ಳಿಯ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ, ಆರೂಢಿ ಶ್ರೀ ಕೋಡಿ ಮಲ್ಲೇಶ್ವರ ದೇವಾಲಯ, ಹೊಳೆನಂಜುಂಡೇಶ್ವರ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್‍ಯಕ್ರಮಗಳು ನಡೆದವು.

Exit mobile version