ಹಾವೇರಿ( ಶಿಗ್ಗಾವಿ): ಶಿವಾಜಿ ಮಹಾರಾಜರು ರಾಷ್ಟ್ರ ಭಕ್ತರು, ಅವರು ಯಾವುದೇ ಪ್ರದೇಶ, ಭಾಷೆಗೆ ಸೀಮಿತವಾದವರಲ್ಲ, ದೇಶ ಭಕ್ತರಿಗೆ ಜಾತಿ, ಮತ, ಪ್ರದೇಶದ ಮಿತಿ ಇರುವುದಿಲ್ಲ. ಶಿವಾಜಿ ಮಹಾರಾಜರು ಇದೆಲ್ಲವನ್ನೂ ಮೀರಿದವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಸಮಾಜ ತಾಲೂಕ ಹಾಗೂ ಶಹರ ಘಟಕದ ವತಿಯಿಂದ ಏರ್ಪಡಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398 ನೇಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಾರತ ದೇಶದಲ್ಲಿ ಹುಟ್ಟಿರುವ ನಾವೆಲ್ಲ ಪುಣ್ಯವಂತರು, ಯಾರು ಇತಿಹಾಸ ತಿಳಿಯುವರೋ ಅವರು ಭವಿಷ್ಯ ಬರೆಯುತ್ತಾರೆ. ಯಾರಿಗೆ ಇತಿಹಾಸ ಇಲ್ಲ ಅವರಿಗೆ ಭವಿಷ್ಯವಿಲ್ಲ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ನೋಡಿದಾಗ ಅವರು ಭಾರತ ಮಾತೆಯ ರಕ್ಷಣೆಗೆ ಹುಟ್ಟಿದ್ದರು.
ಭವಾನಿ ತಾಯಿ ಪ್ರತ್ಯಕ್ಷವಾಗಿ ಆಶೀರ್ವಾದ ಮಾಡಿದ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜರಿಗೆ ದಿವ್ಯ ಶಕ್ತಿ ಹಾಗೂ ದೈವಿ ಶಕ್ತಿ ಇತ್ತು. ಯಾರಿಗೆ ದೈವಿ ಶಕ್ತಿ ಇರುತ್ತದೆಯೋ ಅವರು ಜೀವನದಲ್ಲಿ ಇಡೀ ಜಗತ್ತನ್ನು ಎದುರು ಹಾಕಿಕೊಳ್ಳಲು ಸಿದ್ದರಿರುತ್ತಾರೆ ಎನ್ನುವುದಕ್ಕೆ ಶಿವಾಜಿ ಮಹಾರಾಜರು ಉದಾಹರಣೆ ಎಂದರು.
ನಾನು ಪುಣಾದ ಸಿಂಹಗಢಕ್ಕೆ ಭೇಟಿ ನೀಡಿದ್ದೆ ಶಿವಾಜಿ ಮಹಾರಾಜರ ಹೋರಾಟ ಅಲ್ಲಿಂದ ಪ್ರಾರಂಭವಾಗಿ ದೈತ್ಯ ಮೊಗಲ್ ಸಾಮ್ರಜ್ಯ ಎದುರಿಸಿದ್ದರು. ಮೊಗಲ್ ಸಾಮ್ರಾಜ್ಯ ಪರ್ಷಿಯಾದಿಂದ ಹಿಡಿದು ಭೂತಾನ್ ವರೆಗೂ ಇತ್ತು.
ಆಗ ದಕ್ಚಿಣದಲ್ಲಿ ಬಹುಮನಿ ಸಾಮ್ರಾಜ್ಯ ಇತ್ತು. ಅವರವರ ನಡುವೆ ಸಂಘರ್ಷವಾದಾಗ ಮೊಗಲರ ಕೈಮೇಲಾಯಿತು. ಅವರು ದಕ್ಚಿಣದಲ್ಲಿ ಸಾಮ್ರಜ್ಯ ವಿಸ್ತರಿಸಲು ತೀರ್ಮಾನಿಸಿದಾಗ ಅವರನ್ನು ಒಬ್ಬ ಯುವಕ ತಡೆಯುತ್ತಾನೆ ಎಂದು ಮೊಗಲರು ಎಂದೂ ಊಹಿಸಿರಲಿಲ್ಲ.
ಶಿವಾಜಿ ಮಹಾರಾಜರು ವಿನೂತನ ಯುದ್ದ ತಂತ್ರ ಅನುಸಿರಿಸಿ ಅವರು ವಿಂದ್ಯ ಪರ್ವತ, ನರ್ಮಾದಾ ನದಿ ಕೆಳಗೆ ಮೊಗಲರು ಬಾರದಂತೆ ನೋಡಿಕೊಂಡರು. ಆದ್ದರಿಂದ ಅವರಿಗೆ ದೊಡ್ಡ ಬೆಂಬಲ ಸಿಕ್ಕಿತ್ತು ಎಂದು ಹೇಳಿದರು.
ಕರ್ನಾಟಕಕ್ಕೂ ಸಂಬಂಧವಿದೆ
ಶಿವಾಜಿ ಮಹಾರಾಜರು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿರಲಿಲ್ಲ. ಅವರ ಸಾಮ್ರಾಜ್ಯ ಕರ್ನಾಟಕ ಹಾಗೂ ತಮಿಳುನಾಡಿನ ತಂಜಾವೂರಿನವರೆಗೂ ವಿಸ್ತರಿಸಿದ್ದರು. ಕೆಲವೇ ಕೆಲವು ಜನರನ್ನು ಇಟ್ಟುಕೊಂಡು ಹೊರಾಟದ ಮುಖಾಂತರ ದೊಡ್ಡ ಸಾಮ್ರಾಜ್ಯ ಕಟ್ಟಿದರು.
ಕರ್ನಾಟಕಕ್ಕೂ ಶಿವಾಜಿ ಮಹಾರಾಜರಿಗೂ ಬಹಳ ಸಂಬಂಧ ಇದೆ. ಬೆಂಗಳೂರಿನಲ್ಲಿ ಅವರು ಇದ್ದದ್ದು. ಅವರ ಕುಟುಂಬದವರು ಇಲ್ಲಿ ಇದ್ದರು ಎನ್ನುವುದಕ್ಕೆ ಇತಿಹಾಸದಲ್ಲಿ ದಾಖಲೆ ಇದೆ ಎಂದರು.
ಶಿವಾಜಿಹಾಜರಾರು ರಾಷ್ಟ್ರ ಭಕ್ತರು, ಯಾವುದೇ ಪ್ರದೇಶ ಭಾಷೆಗೆ ಸೀಮಿತವಾದವರಲ್ಲ, ದೇಶ ಭಕ್ತರಿಗೆ ಜಾತಿ, ಮತಣ, ಪ್ರದೇಶದ ಮಿತಿ ಇರುವುದಿಲ್ಲ. ಶಿವಾಜಿ ಮಹಾರಾಜರು ಇದೆಲ್ಲವನ್ನು ಮೀರಿದವರು. ಈಗಲೂ ನಮ್ಮ ದೇಶಕ್ಕೆ ಹಲವಾರು ಕಂಟಕಗಳಿವೆ ಭಾರತವನ್ನು ಗುಲಾಮಗಿರಿಯಲ್ಲಿ ಇಡಬೇಕು ಎನ್ನುವ ಮನಸ್ಥಿತಿ ಇನ್ನೂ ಇದೆ. ಅದಕ್ಕೆ ನಮ್ಮ ಕೇಂದ್ರ ಸರ್ಕಾರ ಉತ್ತರ ಕೊಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಗುಲಾಮಗಿರಿಯಿಂದ ಹೊರ ಬನ್ನಿ ಎಂದು ಹೇಳಿದ್ದಾರೆ. ಒಂದು ವರ್ಗ ಯಾವಾಗಲೂ ಗುಲಾಮಗಿರಿ ಮನಸ್ಥಿತಿಯಲ್ಲಿದ್ದಾರೆ ಎಂದರು.
ನಮ್ಮ ದೇಶದ ಅಖಂಡತೆಗೆ ಸಮಗ್ರತೆಗೆ ಶಿವಾಜಿ ಮಹಾರಾಜರು ಪ್ರೇರಣೆಯಾಗಿದ್ದಾರೆ. ಅವರ ಜಯಂತಿ ಆಚರಣೆ ಮಾಡುವ ಉದ್ದೇಶವೇ ಅದು. ನಮ್ಮ ದೇಶದ ಪರಂಪರೆ, ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆ, ಎಲ್ಲರನ್ನು ಒಳಗೊಳ್ಳುವ ಮಾನವೀಯತೆ, ಅನ್ಯಾಯದ ವಿರುದ್ದ ಹೋರಾಡುವ ಮನಸ್ಥಿತಿ ಶಿವಾಜಿ ಮಹಾರಾಜರಲ್ಲಿ ಏನಿತ್ತೊ ಅದು ನಮ್ಮನ್ನು ಈಗಲೂ ಕಾಪಾಡುತ್ತಿದೆ.
ಎಲ್ಲ ದೇಶಕ್ಕೂ ಒಂದು ಕುರುಹು, ಗುರುತು, ಸ್ವಭಿಮಾನದ ಸಂಕೇತ ಇರುತ್ತದೆ. ವಿವಿಧತೆಯಲ್ಲಿ ಏಕತೆಯಲ್ಲಿ ನಮ್ಮ ದೇಶದ ಶಕ್ತಿ ಇದೆ. ಆ ಶಕ್ತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಶಿವಾಜಿ ಮಹಾರಾಜರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಚಂದ್ರಪ್ಪಜ್ಜ ಕಾಳೆ, ಸುಭಾಸ ಚವ್ಹಾಣ ಸೇರಿದಂತೆ ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು.