ದೊಡ್ಡಬಳ್ಳಾಪುರ; ‘ಮರಾಠಿ ಮಾತನಾಡಲು ಬರಲ್ಲ’ ಎಂದು ಹೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ (KSRTC) ಬಸ್ ನಿರ್ವಾಹಕ ಮೇಲೆ ಹಲ್ಲೆಯನ್ನು ಖಂಡಿಸಿ, ಪುಂಡರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಇಂದು ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತಾಡಿದ ಮುಖಂಡರು, ಕನ್ನಡದ ನೆಲದಲ್ಲಿಯೇ ಕನ್ನಡಿಗನ ಮೇಲೆ ಹಲ್ಲೆ ಹಾಗೂ ಅನ್ಯಾಯವಾದಾಗ ಕರವೇ ಎಂದು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿಯ ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿ ದೈಹಿಕ ಮತ್ತು ಮಾನಸಿಕವಾಗಿ ಕುಂದಿರುವ ನಮ್ಮ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ವಿರುದ್ಧ ಗಾಯದ ಮೇಲೆ ಬರೆ ಎಳೆದಂತೆ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಿಸುವುದು ಯಾವ ನ್ಯಾಯ..??
ರಾಜಕೀಯ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ದಾಖಲಿಸಿರುವ ಈ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕು. ಹಾಗೂ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು.
ನನಗೆ ಮರಾಠಿ ಮಾತನಾಡಲು ಬರಲ್ಲ, ನೀವು ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಪಂಥ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪ್ರಕರಣವನ್ನು ದಾರಿ ತಪ್ಪಿಸುವ ಉದ್ದೇಶದಿಂದ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಿಸಿರುವುದು ಖಂಡನೀಯ.
ಕೂಡಲೇ ಈ ಪ್ರಕರಣವನ್ನು ಹಿಂಪಡೆಯಬೇಕು. ಮಹಾರಾಷ್ಟ್ರ ನೆಲದಲ್ಲಿ ಕರ್ನಾಟಕ ಸಾರಿಗೆ ಬಸ್ ಗಳಿಗೆ ಅವಮಾನಿಸುತ್ತಿರುವ ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರ ಪುಂಡಾಟಿಕೆಯನ್ನು ಹತ್ತಿಕ್ಕಬೇಕು.
ಕನ್ನಡ ನೆಲದಲ್ಲಿದ್ದು ನಾಡ ದ್ರೋಹಿ ಕೆಲಸ ಮಾಡುತ್ತಿರುವ ಎಂಇಎಸ್ ಮತ್ತು ಶಿವಸೇನಾ ಸಂಘಟನೆಗಳನ್ನ ನಿಷೇಧಿಸಿ ಅವರನ್ನು ಗಡಿಪಾರು ಮಾಡಬೇಕೆಂದು ರಾಜ್ಯ ಸರ್ಕಾರವನ್ನ ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷರಾದ ಹಮಾಮ್ ವೆಂಕಟೇಶ್, ತಾಲೂಕು ಉಪಾಧ್ಯಕ್ಷ ಜೋಗಿಹಳ್ಳಿ ಅಮ್ಮು, ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ತಾಲೂಕು ಕಾರ್ಯದರ್ಶಿ ಮುಖೇನಳ್ಳಿ ರವಿ, ನಗರದ ಅಧ್ಯಕ್ಷ ಶ್ರೀನಗರ ಬಶೀರ್, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಸೂರಿ, ಮಾರುತಿ, ಸಿರಾಜ್, ಮುನಿಕೃಷ್ಣ, ತುಫೆಲ್, ರಾಮಕೃಷ್ಣ ಮಡಿವಾಳ, ಆರೀಫ್ ಮತ್ತಿತರರಿದ್ದರು.