ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಿಸರ ಹಾಗೂ ಅರಣ್ಯ ರಕ್ಷಿಸುವ ನಿಟ್ಟಿನಲ್ಲಿ ದಿನೇ ದಿನೇ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಭ್ರಷ್ಟ ಅಧಿಕಾರಿಗಳು ಕುಗ್ಗುತ್ತಿರುವ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ರಕ್ಷಿಸುವ ಬದಲು ಇನ್ನಷ್ಟು ಕುಗ್ಗಿಸಲು ಹೊರಟು ವನ್ಯಜೀವಿಗಳ ಅಸ್ತಿತ್ವ ಹಾಗೂ ಪರಿಸರವನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಬಳಿಯ ಚಿಂಕಾರದಲ್ಲಿ ಸಚಿವರ ಗಮನಕ್ಕೂ ಬಾರದಂತೆ ಅಧಿಕಾರಿಗಳು ‘ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ 120 ಎಕರೆ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಶಿಫಾರಸು ಮಾಡಿರುವುದು ಪರಿಸರ ಪ್ರೇಮಿಗಳಿಗೆ ದಿಗಿಲು ಹುಟ್ಟಿಸಿದೆ.
ಸದ್ಯ ಕಬ್ಬಿಣದ ಅದಿರು ಗಣಿಗಾರಿಕೆಗಾಗಿ ಗುರುತಿಸಲಾಗಿರುವ ಈ ಪ್ರದೇಶದಲ್ಲಿ 17,200 ಮರಗಳು ಹನನವಾಗುತ್ತದೆ ಎಂದರೆ ಈ ಸರ್ಕಾರದ ಅವಧಿಯಲ್ಲಿ ಅರಣ್ಯ ನಾಶಕ್ಕೆ ಅಧಿಕಾರಿಗಳು ಟೊಂಕಕಟ್ಟಿ ನಿಂತಂತಿದೆ.
ಈ ಕೂಡಲೇ ಚಿಂಕಾರದಲ್ಲಿ ಗಣಿಗಾರಿಕೆ ಆರಂಭಿಸಲು ನಡೆದಿರುವ ಅರಣ್ಯ ದೌರ್ಜನ್ಯ ನಿರ್ಧಾರದ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ಗಣಿಗಾರಿಕೆಗೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ನಿರ್ಧಾರ ಪ್ರಕಟಿಸಲಿ, ಆ ಮೂಲಕ ಅರಣ್ಯ ಪ್ರದೇಶ ಹಾಗೂ ಅಳಿವಿನಂಚಿನಲ್ಲಿರುವ ಅಮೂಲ್ಯ ಕಾಡು ಪ್ರಾಣಿಗಳು ಹಾಗೂ ವಿವಿಧ ಪಕ್ಷಿಗಳ ಆವಾಸಸ್ಥಾನದ ರಕ್ಷಣೆಗೆ ಬದ್ಧತೆ ತೋರಲಿ ಎಂದು ಒತ್ತಾಯಿಸಿದ್ದಾರೆ.