ಮೈಸೂರು; ಇತ್ತೀಚಿಗೆ ನಡೆದ ಉದಯಗಿರಿ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣ ಕುರಿತು ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಮೇಲೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ (pratap simha) ವಿರುದ್ಧ ಎಫ್ಐಆರ್ ದಾಖಲಾಗಿದೆ.
ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ನೀಡಿದ್ದ ದೂರು ಆಧರಿಸಿ ಮೈಸೂರು ಉದಯಗಿರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನ ಅನ್ವಯ ಮಾಜಿ ಸಂಸದ ಪ್ರತಾಪ್ ಸಿಂಹ ಫೆಬ್ರವರಿ 20 ರಂದು ಉದಯಗಿರಿ ವ್ಯಾಪ್ತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಮುಸ್ಲಿಂ ಸಮುದಾಯದವರು ಈ ದೇಶದ ಪ್ರಜೆಗಳೇ ಅಲ್ಲ ಎಂಬ ರೀತಿಯಲ್ಲಿ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಜನ ಸಂಖ್ಯೆ ಜಾಸ್ತಿ ಮಾಡಿಕೊಂಡು ಹೆಚ್ಚು ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಂ ಮತ್ತು ಹಿಂದೂ ಸಮುದಾಯದ ನಡುವೆ ಕೋಮು ಘರ್ಷಣೆ ಉಂಟುಮಾಡುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಮುಸ್ಲಿಂ ಸಮುದಾಯದ ಜನರನ್ನು ನಿಂದಿಸುವ ರೀತಿಯಲ್ಲಿ ಪ್ರಚೋದನಾ ಭಾಷಣವನ್ನು ಮಾಡಿದ್ದಾರೆ. ಆದ್ದರಿಂದ ಪ್ರತಾಪ್ ಸಿಂಹರವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಬ್ರಾರ್ ದೂರು ನೀಡಿದ್ದಾರೆ.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಕಿಡಿಗೇಡಿಯೋರ್ವನ ಅವಹೇಳನಾಕಾರಿ ಪೋಸ್ಟ್ ಹಿನ್ನೆಲೆಯಲ್ಲಿ, ಉದಯಗಿರಿ ಠಾಣೆ ಮೇಲೆ ಕಿಡಿಗೇಡಿ ಯುವಕರು ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಾಪ್ ಸಿಂಹ ಹೇಳಿಕೆ ಪ್ರತಿಕ್ರಿಯೆ ನೀಡಿದ್ದರು.