ಬೆಂಗಳೂರು: ಯತ್ನಾಳರು ಕೇಂದ್ರ ಶಿಸ್ತು ಸಮಿತಿ ನೀಡಿರುವ ‘ಕಾರಣ ಕೇಳಿ ನೋಟೀಸಿಗೆ’ ಸಮರ್ಪಕವಾದ ಉತ್ತರ ನೀಡಿಲ್ಲ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಇವೆಲ್ಲ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ (Basangouda Patil Yatnal)
ಈ ಕುರಿತು ಎಕ್ಸ್ ಖಾತೆಯಲ್ಲಿ ದಿನ ಪತ್ರಿಕೆ ಒಂದರ ಪ್ರತಿ ಪೋಸ್ಟ್ ಮಾಡಿರುವ ಅವರು, ನಾನು ನೀಡಿರುವ ಉತ್ತರಕ್ಕೆ ಶಿಸ್ತು ಸಮಿತಿ ಯಾವುದೇ ತಕರಾರು, ಆಕ್ಷೇಪಣೆ ಅಥವಾ ನಾವು ನೀಡಿರುವ ಉತ್ತರದಲ್ಲಿ ನ್ಯೂನತೆಗಳು ಇರುವುದರ ಬಗ್ಗೆ ಸಮಿತಿ ಹೇಳಿಲ್ಲ.
ಮಾಧ್ಯಮಗಳು ಅತಿರಂಜಕವಾಗಿ, ನಿರಾಧಾರವಾಗಿ ವರದಿ ಮಾಡಿ ಜನರಿಗೆ ತಪ್ಪು ಸಂದೇಶ ನೀಡುವುದು ತಪ್ಪು ಹಾಗೂ ವೃತ್ತಿಯೋಗ್ಯವಲ್ಲದ ವರದಿಗಾರಿಕೆಯಾಗುತ್ತದೆ.
ನೋಟೀಸಿನ ಬಗ್ಗೆ ಮಾಹಿತಿ ಬೇಕಾಗಿದ್ದಾರೆ ವರದಿಗಾರರು ನನ್ನನ್ನೇ ಸಂಪರ್ಕಿಸಿ ನನ್ನನು ಕೇಳಬಹುದಾಗಿತ್ತು; ಆದರೆ, ಈ ರೀತಿ ಸುದ್ದಿ ನೀಡುವುದು ಅಕ್ಷಮ್ಯ.
ಈ ಹಿಂದೆಯೂ ಕೂಡ ಕಿಂಚಿತ್ತೂ ಸಂಶೋಧನೆ ನಡೆಸದೆ, ವಿಷಯ ಪರಿಣಿತರನ್ನು ಕೇಳದೆ ಕರ್ನಾಟಕ ಉಚ್ಚ ನ್ಯಾಯಾಲಯವು ನನ್ನ ಮೇಲೆ ಹೂಡಿದ್ದ ಪ್ರಕರಣದಲ್ಲಿ ತಡೆಯಾಜ್ಞೆ ನೀಡಿದ್ದರೂ ಸಹ ನನ್ನ ಮೇಲೆ ವಾರಂಟ್ ಜಾರಿಯಾಗಿದೆ ಹಾಗೂ ದಸ್ತಗಿರಿ ಆಗುವ ಸಂಭಾವನೆ ಇದೆ ಎಂದು ‘ಬ್ರೇಕಿಂಗ್ ನ್ಯೂಸ್’ ಕೊಟ್ಟಿದ್ದರು.
ಮಾಧ್ಯಮಗಳು ಜವಾಬ್ದಾರಿಯುತವಾಗಿ ವರದಿ ಮಾಡಲಿ ಹಾಗೂ ಸಂಕೀರ್ಣ ವಿಷಯಗಳನ್ನು ಚರ್ಚಿಸಿ, ವಿಷಯ ಪರಿಣಿತರರೊಂದಿಗೆ ಸಮಾಲೋಚನೆ ನಡೆಸಿ ನಂತರ ‘ಸ್ಟೋರಿ’ ಬರೆದರೆ ಸೂಕ್ತ ಎಂದು ಸಲಹೆ ನೀಡಿದ್ದಾರೆ.