ವಾರಾಣಸಿ; ಪ್ರಯಾಗರಾಜ ಕುಂಭಮೇಳಕ್ಕೆ ತೆರಳಿದ ಬೀದರ ಜಿಲ್ಲೆಯ ಯಾತ್ರಿಕರು ಭೀಕರ ರಸ್ತೆ ಅಪಘಾತಕ್ಕೀಡಾಗಿರುವುದು (Accident) ತುಂಬಾ ದುಃಖದ ಸಂಗತಿ. ಈ ಘಟನೆಗೆ ನಾನು ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಸಂತ್ರಸ್ತ ಕುಟುಂಬಗಳೊಂದಿಗೆ ಸರ್ಕಾರ ನಿಂತಿದ್ದು, ಮೃತರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ.
ವಾರಾಣಸಿಯ ಐಜಿ ಕರ್ನಾಟಕದವರೆ ಇದ್ದು, ಅವರೊಂದಿಗೆ ಮಾತನಾಡಿ, ಮೃತ ದೇಹಗಳನ್ನು ರಾಜ್ಯಕ್ಕೆ ತರಲು ವ್ಯವಸ್ಥೆ ಮಾಡಲಾಗುತ್ತಿದ್ದು, ಗಾಯಾಳುಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ಸರ್ಕಾರದ ವತಿಯಿಂದ ಒದಗಿಸಲಾಗುವುದು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ನಾವು ಅವರೊಂದಿಗಿದ್ದೇವೆ ಎಂದಿದ್ದಾರೆ.
ಘಟನೆ ವಿವರ

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದವರಿದ್ದ ಕ್ರೂಸರ್ ವಾಹನವೊಂದು ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಿರ್ಜಾಮುರಾದ್ ಪ್ರದೇಶದ ರೂಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತ ಐವರಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ.
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಮಿರ್ಜಾಮುರಾದ್ ಠಾಣಾ ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಸಂತೋಷ್ ಕುಮಾರ್ (43 ವರ್ಷ), ಸುನೀತಾ(35 ವರ್ಷ), ನೀಲಮ್ಮ(60 ವರ್ಷ) ಗಣೇಶ್ ಮತ್ತು ಶಿವಕುಮಾರ್ ಮೃತ ದುರ್ದೈವಿಗಳು.
ಕವಿತಾ, ಅನಿತಾ, ಲೀಲಾವತಿ, ಸಾಯಿನಾಥ್, ಭಗವಾನ್ ಮತ್ತು ಸುಲೋಚನಾ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಐವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ.