Site icon Harithalekhani

ಮೂರು ದಿನದ ಸಂತೆಯಲ್ಲಿ ಪಾಪವನ್ನು ಕಳೆದು ಪುಣ್ಯ ಸಂಪಾದಿಸಬೇಕು: ಆರ್ ಅಶೋಕ

During the three-day Sante, one should lose sin and acquire merit: R Ashoka

During the three-day Sante, one should lose sin and acquire merit: R Ashoka

ಮಂಡ್ಯ: ವಿಜ್ಞಾನ-ತಂತ್ರಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕು. ವಿಜ್ಞಾನ ವಿವೇಕಿಗಳ ಕೈಯಲ್ಲಿ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ( R Ashoka) ಹೇಳಿದರು.

ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ, ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವದಲ್ಲಿ ಆರ್‌.ಅಶೋಕ ಅವರು ಪಾಲ್ಗೊಂಡರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನಕ್ಕೂ ಮಠಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರುತ್ತದೆ. ಈ ಕಾರ್ಯಕ್ರಮದಲ್ಲಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗಿದೆ.

ಧರ್ಮ ಪಾಲಿಸುವವರ ಕೈಯಲ್ಲಿ ಧರ್ಮ ಇದ್ದರೆ ಮಾತ್ರ ಎಲ್ಲರಿಗೂ ಒಳಿತಾಗುತ್ತದೆ. ಅಧರ್ಮೀಯರ ಕೈಯಲ್ಲಿ ವಿಜ್ಞಾನ ಸಿಕ್ಕಿದರೆ ಅದರಿಂದ ದೊಡ್ಡ ಅನಾಹುತವಾಗುತ್ತದೆ. ಇಂದು ರೈಲು, ವಿಮಾನದ ಮೂಲಕ ವೇಗವಾಗಿ ದೂರದ ಸ್ಥಳಗಳನ್ನು ತಲುಪಬಹುದು.

ಧರ್ಮ ಪಾಲನೆ ಮಾಡುವವರು ಇಂತಹ ವಿಜ್ಞಾನ-ತಂತ್ರಜ್ಞಾನದ ಸಾಧನ ಬಳಸಿದರೆ ಏನೂ ಆಗಲ್ಲ. ಅದರೆ ಅಧರ್ಮೀಯರು ಬಳಸಿದರೆ ಅಪಾಯವಾಗುತ್ತದೆ.

ವಿಮಾನವನ್ನು ಬಳಸಿಯೇ ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡವನ್ನು ಧ್ವಂಸ ಮಾಡಲಾಯಿತು ಎಂದರು.

ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಅಬ್ದುಲ್‌ ಕಲಾಂ ಅವರು ಇಡೀ ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಬೆಳೆಸಿದರು. ಪೊಲೀಸರ ಬಳಿ ಎಷ್ಟೇ ತಂತ್ರಜ್ಞಾನವಿದ್ದರೂ ಕಾಡುಗಳ್ಳ ವೀರಪ್ಪನ್‌ನನ್ನು ಹಲವಾರು ವರ್ಷಗಳ ಕಾಲ ಹಿಡಿಯಲು ಸಾಧ್ಯವಾಗಲಿಲ್ಲ.

ವಿವೇಕಿಗಳ ಬಳಿ ವಿಜ್ಞಾನವಿದ್ದರೆ, ಅದು ಸದುಪಯೋಗವಾಗುತ್ತದೆ. ಅವಿವೇಕಿಗಳ ಬಳಿ ಇದ್ದರೆ ಹಾಳಾಗುತ್ತದೆ. ವಿಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕೆಂಬ ಕಾರಣಕ್ಕೆ ಮಠದಲ್ಲಿ ವಿಜ್ಞಾನ ಮೇಳ ಮಾಡಲಾಗುತ್ತಿದೆ ಎಂದರು.

ಮಹಾಕುಂಭಮೇಳದಲ್ಲಿ ಸುಮಾರು 40 ಕೋಟಿ ಜನರು ಸೇರಿದ್ದಾರೆ. ಆ ಕಾರ್ಯಕ್ರಮದ ಆಯೋಜಕರಲ್ಲಿ ಜುನಾ ಅಖಾಡದ ಪೂಜ್ಯ ಶ್ರೀ ಅವಧೇಶನಾಂದ ಗಿರಿ ಮಹಾರಾಜ್‌ ಕೂಡ ಒಬ್ಬರು. ಇಂತಹ ಮಹಾ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಅವರಿಗೆ ನಾನು ವಂದಿಸಿದ್ದೇನೆ. ಅವರನ್ನು ನೋಡಿಯೇ ನನಗೆ ಪುಣ್ಯ ಬಂದಿದೆ ಎಂದರು.

ಮಹಾಕುಂಭಮೇಳಕ್ಕೆ ಹೋದರೆ ಪುಣ್ಯ ಬರುತ್ತದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಮೂರು ದಿನದ ಸಂತೆಯಲ್ಲಿ ನಾವು ಪಾಪವನ್ನು ಕಳೆದು ಪುಣ್ಯ ಸಂಪಾದಿಸಬೇಕು. ನಾವು ಮಾಡುವ ಒಳ್ಳೆಯ ಕೆಲಸದಲ್ಲಿ ಸದಾ ದೇವರು ಇರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ನಾವು ಕೆಲಸ ಮಾಡಬೇಕು ಎಂದರು.

ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವರ್ಷದ ಪಟ್ಟಾಭಿಷೇಕವನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಮಠವನ್ನು ಮುನ್ನಡೆಸುತ್ತಿದ್ದರು. ಆಗ ನಾನು ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೆ. ಅವರ ಬಳಿಕ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಠವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದರು.

Exit mobile version