ದೊಡ್ಡಬಳ್ಳಾಪುರ (Doddaballapura): ಕಾರ್ಪೆಂಟರ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕರು ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ನಿನ್ನೆ ಸಂಜೆ ಸಂಭವಿಸಿದೆ.
ಮೃತರನ್ನು ಉತ್ತರಪ್ರದೇಶ ಮೂಲದವರು ಎನ್ನಲಾಗುತ್ತಿರುವ ರಾಹುಲ್, ಲಲ್ಲನ್, ಬಿನಿತ್ ಎಂದು ಗುರುತಿಸಲಾಗಿದೆ.
ಮುತ್ತೂರಿನಲ್ಲಿ ವಾಸವಿದ್ದ ಮೃತ ಮೂವರು ಯುವಕರು, ಕಾರ್ಪೆಂಟರ್ ಕೆಲಸ ಮಾಡುವವರಾಗಿದ್ದು, ಬುಧವಾರ ಕೊನಘಟ್ಟದಲ್ಲಿ ಕೆಲಸ ಮುಗಿಸಿ, ಮರಳಿ ಮನೆಗೆ ತೆರಳುವ ವೇಳೆ ಕೊನಘಟ್ಟದಿಂದ ಆಟೋದಲ್ಲಿ ಬಂದು ಹುತಾತ್ಮ ಪಿಎಸ್ಐ ಜಗದೀಶ್ ವೃತ್ತದ ಗೇಟ್ ಬಳಿ ಇಳಿದಿದ್ದಾರೆ ಎನ್ನಲಾಗಿದೆ.
ಬಳಿಕ ಟ್ರಾಕ್ ಮೇಲೆ ನಡೆದುಕೊಂಡು ತೆರಳುವ ವೇಳೆ ಏಕಾಏಕಿ ಬಂದ ಪುಟ್ಟಪರ್ತಿ- ಬೆಂಗಳೂರು ನಡುವೆ ಸಂಚರಿಸುವ ರೈಲು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾಗಿದ್ದು, ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಮತ್ತೊಂದೆಡೆ ಘಟನೆ ನಡೆದು ಹಲವು ಗಂಟೆಗಳು ಕಳೆದರು ಶವಗಳನ್ನು ಪಡೆಯಲು ಯಾರು ಮುಂದೇ ಬರುತ್ತಿಲ್ಲ ಎಂಬ ಪರದಾಟ ರೈಲ್ವೇ ಪೊಲೀಸರದ್ದಾಗಿದೆ.
ಮೃತರ ಗೆಳೆಯರು ಬಂದು ಗುರುತು ಪತ್ತೆ ಮಾಡಿದ್ದಾರಾದ್ರೂ, ಸ್ವಗ್ರಾಮಕ್ಕೆ ಕೊಂಡಯ್ಯಲು ಯಾರು ಮುಂದೆ ಬರುತ್ತಿಲ್ಲ. ಬೆಂಗಳೂರಿನಲ್ಲಿರುವ ಸಂಬಂಧಿಕನೋರ್ವನ ಮೊಬೈಲ್ ಸಂಖ್ಯೆ ಪಡೆದು ಮಾಹಿತಿ ನೀಡಿರುವ ಪೊಲೀಸರು, ಇಂದು ಬೆಳಗ್ಗೆ ಕರೆ ಮಾಡಿದರೆ, ಆತನ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ತಿಳಿದು ಬಂದಿದೆ.
ಇದು ರೈಲ್ವೇ ಪೊಲೀಸರಿಗೆ ತಲೆ ನೋವಿಗೆ ಕಾರಣವಾಗಿದ್ದು, ಮೃತ ದೇಹಗಳನ್ನು ಕುಟುಂಬಸ್ಥರಿಗೆ ತಲುಪಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.