ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ (Police) ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಲು ಕಾರಣವಾಗಿದೆ ಎನ್ನಲಾದ ಸಾಮಾಜಿಕ ಜಾಲತಾಣದಲ್ಲಿನ ಅವಹೇಳನಕಾರಿ ಪೋಸ್ಟ್ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಮೊಬೈಲ್ ಹಿಡಿದು ಬೇಕಾಬಿಟ್ಟಿ ಪೊಸ್ಟ್ ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣವಾಗುವ ಕಿಡಿಗೇಡಿಗಳ ಮಟ್ಟ ಹಾಕಲು ಪೊಲೀಸರು ಸಿದ್ದರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕ ಸಿಕೆ ಬಾಬಾ ನೇತೃತ್ವದಲ್ಲಿ ಹಾಗೂ ಅಪರ ಪೊಲೀಸ್ ಅಧೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸಾಮಾಜಿಕ ಜಾಲತಾಣ ಸಿಬ್ಬಂದಿಗಳಿಗೆ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆಯುವಂತಹ ವಿಷಯಗಳ ಬಗ್ಗೆ ನಿಗಾವಹಿಸಲು ಸೂಚನೆ ನೀಡಲಾಗಿದೆ.
ಇದೇ ವೇಳೆ ಸಿಬ್ಬಂದಿಗಳು ಶಿಸ್ತು ಬದ್ಧವಾಗಿ ಕೆಲಸ ನಿರ್ವಹಿಸಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ.