ಬೆಂಗಳೂರು: ಫೆಬ್ರವರಿ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಹಣದ ಬದಲಿಗೆ ಅಕ್ಕಿಯನ್ನು ವಿತರಿಸಲು ತೀರ್ಮಾನಿದಲಾಗಿದೆ ಎಂದು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ತಿಳಿಸಿದರು.
ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮಹತ್ವದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲು ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಲಾಗಿತ್ತು.
ನಂತರದ ದಿನಗಳಲ್ಲಿ ಅಕ್ಕಿಯ ಲಭ್ಯವಾಗದ ಕಾರಣ ನಮ್ಮ ಸರ್ಕಾರ ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ರೂ. 170/- ರೂಗಳಂತೆ ನೇರ ನಗದು ವರ್ಗಾವಣೆ ಮಾಡುತ್ತಿದೆ.
ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನಲೆಯಲ್ಲಿ ಜೂನ್-2025ರವರೆಗೆ OMSS(D)ರಡಿ ಪ್ರತಿ ಕೆ.ಜಿ.ಗೆ ರೂ. 22.50/- ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ವಿತರಿಸಲು ಉದ್ದೇಶಿಸಿರುವ 05 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರದ OMSS (D) ಯೋಜನೆಯಡಿ ಖರೀದಿಸುವ ಫೆಬ್ರವರಿ-2025ರ ಮಾಹೆಯಿಂದ ವಿತರಿಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರ ನೀಡುವ NFSA ಹಾಗೂ ರಾಜ್ಯದ ಹೆಚ್ಚುವರಿ ಕಾರ್ಡ್ಗಳು ಸೇರಿದಂತೆ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. (ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ + ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಬದಲಾಗಿ DBT ಮೂಲಕ ಹಣ ನೀಡಲಾಗುತ್ತಿದೆ)
2023-24ನೇ ಸಾಲಿನಲ್ಲಿ OMSS(D) ಯಡಿ ನಿಗದಿಪಡಿಸಿದ ದರ ರೂ. 34.60/-ರ ದರದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಬೇಕಾಗುವ ಅಕ್ಕಿ 2.29 ಲಕ್ಷ ಮೆ.ಟನ್ ವಾರ್ಷಿಕ 27.48 ಲಕ್ಷ ಮೆ.ಟನ್ ಸರಬರಾಜು ಮಾಡಲು ಕೋರಿದಾಗ ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಇದ್ದರೂ ಸಹ ನಾವು ಕೇಳಿದಾಗ ಕೊಡಲಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು FCI ನಿಂದ ರಾಜ್ಯಕ್ಕೆ OMSS(D) ಅಕ್ಕಿ ನೀಡಲು ನಿರಾಕರಿಸಿದ ಕಾರಣ ರಾಜ್ಯದಲ್ಲಿರುವ AAY ಮತ್ತು PHH ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ. 34.00 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜುಲೈ-2023 ತಿಂಗಳಿಂದ ಡಿ.ಬಿ.ಟಿ. ಮೂಲಕ ಹಣವನ್ನು ವರ್ಗಾವಣೆ ಮಾಡಲು ಆದೇಶಿಸಲಾಗಿದೆ.
ಅದರಂತೆ, ಜುಲೈ-2023 ತಿಂಗಳಿಂದ ಇಲ್ಲಿಯವರೆಗೆ ಒಂದು ಕೆ.ಜಿ. ಅಕ್ಕಿಗೆ ರೂ. 34.00 ರಂತೆ 5 ಕೆ.ಜಿ. ಅಕ್ಕಿಗೆ ಪ್ರತಿ ಸದಸ್ಯರಿಗೆ ರೂ. 170/-ರಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಅಕ್ಟೋಬರ್-2024ರ ಮಾಹೆಯಲ್ಲಿ 1,16,39,179 ಕಾರ್ಡ್ಗಳ 4,12,16,838 ಫಲಾನುಭವಿಗಳಿಗೆ ರೂ. 676.79 ಕೋಟಿ DBT ಮಾಡಲಾಗಿದೆ. DBT ಪ್ರಾರಂಭವಾದ ಜುಲೈ-2023 ರಿಂದ ಅಕ್ಟೋಬರ್-2024ರವರೆಗೆ ರೂ. 10452.00 ಕೋಟಿ DBT ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ಮಾಹೆಯ DBT ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಕೇಂದ್ರ ಸರ್ಕಾರ ದಿಂದ ಅಕ್ಕಿ ಲಭ್ಯವಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒ ಎಮ್ ಎಸ್ ಎಸ್ (OMSS)ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾದಿಂದ ಖರೀದಿಸಿ ಫೆಬ್ರವರಿ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಯಡಿ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಿದೆ.
ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ
ಭಾರತ ಸರ್ಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ.
ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವ ಮೂಲಕ ಕರ್ನಾಟಕ ರಾಜ್ಯ ಹಸಿವುಮುಕ್ತ ಕರ್ನಾಟಕವಾಗಿಸಿರುವುದು ನಮ್ಮ ಸರ್ಕಾರದ ಹೆಮ್ಮೆಯ ವಿಷಯವಾಗಿದೆ.
ಅನ್ನ ಸುವಿಧಾ
2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅನ್ನಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. 80 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ಮನೆಯ ಬಾಗಿಲಿಗೆ ತಲುಪಿಸಲಾಗುತ್ತಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು ಖರೀದಿ 366 ಕೇಂದ್ರಗಳನ್ನು ತೆರೆಯಲಾಗಿದೆ.
ದಿನಾಂಕ: 01-12-2024 ರಿಂದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕ: 31-03-2025 ಆಗಿರುತ್ತದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕರಾಜ್ಯಕೃಷಿಮಾರಾಟಮಂಡಳಿ ಹಾಗೂ ಕರ್ನಾಟಕರಾಜ್ಯಸಹಕಾರ ಮಾರಾಟಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ.
ರಾಗಿ
ಕೇಂದ್ರ ಸರ್ಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ ರೂ. 4,290/- ನಿಗದಿಪಡಿಸಿದೆ. ಮತ್ತು ಖರೀದಿ ಗುರಿಯನ್ನು 4.40 LMT ನಿಗದಿಪಡಿಸಿದೆ.
ಈಗಾಗಲೇ 3.6 LMT Quantity ರಾಗಿ ನೀಡಲು 2,54,528 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 10 ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ಭತ್ತ
ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 2,300/- “ಎ”ಗ್ರೇಡ್ ಭತ್ತಕ್ಕೆ ರೂ. 2,320 ನಿಗದಿಪಡಿಸಿದೆ. ಖರೀದಿ ಗುರಿಯನ್ನು 7.5 LMT ನಿಗದಿಪಡಿಸಿದೆ.
ಈಗಾಗಲೇ 0.110 LMT ಭತ್ತ ನೀಡಲು 3,388 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ಪ್ರತಿ ರೈತರಿಂದ 50 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ಜೋಳ
ಕೇಂದ್ರ ಸರ್ಕಾರ ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 3,371/- ಮಾಲ್ಡಂಡಿ ಜೋಳಕ್ಕೆ ರೂ. 3,421 ನಿಗದಿಪಡಿಸಿದೆ. ಖರೀದಿ ಗುರಿಯನ್ನು 1.00 LMT ನಿಗದಿಪಡಿಸಿದೆ.
ಈಗಾಗಲೇ 0.709 LMT ಜೋಳ ನೀಡಲು 17,527 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಪ್ರತಿ ರೈತರಿಂದ 150 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ಆಹಾರ ಇಲಾಖೆಯ ಸಮಗ್ರ ಸುಧಾರಣೆ:-
ಇಲಾಖೆಯ ಸಮಗ್ರ ಸುಧಾರಣೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ MSP ಖರೀದಿ ಪ್ರಕ್ರಿಯೆಯಲ್ಲಿ ಪಾದರ್ಶಕವಾದ ಅನುಷ್ಠಾನ ತರಲು ತಿಳಿಸಿರುತ್ತೇನೆ.
ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು.
ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಕಾನೂನು ಮಾಪನಶಾಸ್ತ್ರ ಇಲಾಖೆ
ಕಾನೂನು ಮಾಪನಶಾಸ್ತ್ರ ಇಲಾಖೆ ಪುನಾರಚನೆ ಮಾಡಿ, ಅವರಿಗೆ ಅವಶ್ಯಕ ವಾಹನಗಳನ್ನು ಒದಗಿಸಿ, ಇಲಾಖೆಯ ಅಧಿಕಾರಿಗಳು ತಪಾಸಣಾ ಹೆಚ್ಚು ಮಾಡಲು ಗುರಿ ನಿಗಧಿಪಡಿಸಲಾಗಿತು.
ಇದರಿಂದ 2023-24ರಲ್ಲಿ ರಾಜಸ್ವ ಸಂಗ್ರಹಕ್ಕೆ ರೂ. 53.33 ಕೋಟಿ ಗುರಿ ನಿಗದಿಪಡಿಸಲಾಗಿತ್ತು. ರೂ. 83.19 ಕೋಟಿ ರಾಜಸ್ವವನ್ನು ಸಂಗ್ರಹಿಸಲಾಗಿತ್ತು. 2024-25ನೇ ಸಾಲಿನಲ್ಲಿ 66.00 ಕೋಟಿ ರಾಜಸ್ವ ಸಮಗ್ರ ಗುರಿಯಿತ್ತು.
ಜನವರಿ ರೂ. 63.00 ಕೋಟಿ ರಾಜಸ್ವ ಸಂಗ್ರಹಿಸಲಾಗಿದೆ. ಮಾರ್ಚ್-2025ರ ಅಂತ್ಯಕ್ಕೆ ರೂ. 20.00 ಕೋಟಿ ರಾಜಸ್ವ ಸಂಗ್ರಹಿಸುವ ನಿರೀಕ್ಷೆ ಅಳತೆ ಮತ್ತು ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ಪ್ರಕರಣವನ್ನು ದಾಖಲಿಸಲು ಮತ್ತು ದಂಡ ವಸೂಲಿ ಮಾಡಲು ನಿರ್ದೇಶನ ನೀಡಲಾಗಿದೆ.
ಇಲಾಖೆಯಲ್ಲಿ ಬಹಳ ವರ್ಷಗಳಿಂದ ಇದ್ದ ಸರ್ವರ್ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಇಲಾಖೆಯ ಬಹುದಿನದ ಬೇಡಿಕೆ ಆಹಾರ ಇಲಾಖೆಯ ಕಛೇರಿಗಳ ಸಂಕೀರ್ಣ ಆಹಾರಸೌಧವನ್ನು ರೂ. 50.00 ಕೋಟಿ ವೆಚ್ಚದಲ್ಲಿ ಆಲಿ ಆಸ್ಕರ್ ರಸ್ತೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
ಆಹಾರ ಇಲಾಖೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಪಡಿತರ ವಿತರಣೆ ಸಮರ್ಪಕವಾಗಿರಬೇಕು, ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಗೊಳಿಸಬೇಕು, ಸಗಟು ಮಳಿಗೆ ಮತ್ತು ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣಾ ಮಾಡಬೇಕು, ರಾಷ್ಟ್ರೀಯ ಭದ್ರತಾ ಕಾಯ್ದೆ ಆಶಯದಂತೆ ಪ್ರತಿಯೊಬ್ಬರಿಗೂ ಅನ್ನ, ಆಹಾರ ಸಿಗಬೇಕು.
ಈ ನಿಟ್ಟಿನಲ್ಲಿ ಇಲಾಖೆಯು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಇಲಾಖಾ ಕಾರ್ಯಕ್ರಮಗಳ ಜನಸ್ನೇಹಿಯಾಗಿ ಅನುಷ್ಠಾನಗೊಳ್ಳುವ ರೀತಿಯಲ್ಲಿ ಹೊಸ ತಂತ್ರಜ್ಞಾನ, ಬದಲಾವಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಕಟ್ಟುನಿಟ್ಟಿನ ಸೂಚನೆ ನೀಡಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್,ನಿಗಮದ ನಿರ್ದೇಶಕ ಚಂದ್ರಕಾಂತ್,ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಎಂ ಎಸ್ ಎನ್. ಬಾಬು.ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಸಿಗೆ ಆರಂಭ, ಕುಡಿಯುವ ನೀರು, ಜಾನುವಾರು ಮೇವಿಗೆ ಆದ್ಯತೆ ನೀಡಿ
ದೇವನಹಳ್ಳಿ: ಬೇಸಿಗೆ ಆರಂಭವಾಗುತಿದ್ದು, ಜಿಲ್ಲಾಡಳಿತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳನ್ನು ಸರಿಯಾಗಿ ಉಪಚರಿಸಬೇಕೆಂದು ಆಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಬೇಕು. ಹಣದ ಕೊರತೆಯಿಲ್ಲ, ಜಿಲ್ಲಾಧಿಕಾರಿ ಗಳ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಬಳಸಿಕೊಳಿ ಎಂದರು.
ಪೋಡಿ ಅಭಿಯಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲೂ ಪ್ರಥಮ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ರಾಜ್ಯದ ಮೊದಲ ಪೋಡಿಮುಕ್ತ ಜಿಲ್ಲೆಯಾಗುವಂತೆ ನೋಡಿಕೊಳ್ಳಬೇಕೆಂದರು. ಗ್ರಾಮೀಣ ರಸ್ತೆಗಳು, ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನದ ರಸ್ತೆಗಳ ಒದಗಿಸುವ ಸಂಬಂಧ ವಾರದಲ್ಲಿ ಒಂದು ದಿನ ಅಥವ ಒಂದು ಮಧ್ಯಾಹ್ನ ಈ ಬಗೆಗೆ ಅಧಿಕಾರಿಗಳ ಸಭೆಯಾಗಬೇಕೆಂದರು.
ಜಿಲ್ಲೆಯ ಹಲವು ಕೆರೆಗಳಲ್ಲಿ ಮಳೆಯಿಲ್ಲದ ಕಾರಣ ಮರ ಗಿಡಗಳು ಬೆಳೆದಿದ್ದು ಅವುಗಳ ತೆರವುಗೊಳಿಸಬೇಕು, ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯವಾಗಬೇಕೆಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿವೇಶನ ರಹಿತರಿಗೆ ಮಾರ್ಚ್ ಅಂತ್ಯದೊಳಗಾಗಿ ಗರಿಷ್ಟ ಪ್ರಮಾಣದ ನಿವೇಶನಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ 20 ಸಾವಿರದಷ್ಟು ವಸತಿ ರಹಿತರು ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದು, ಆದ್ಯತೆಯ ಮೇರೆಗೆ ನಿವೇಶನ ಹಂಚಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಓ ಕೆ.ಅನುರಾಧ, ಎಡಿಸಿ ಹೆಚ್.ಅಮರೇಶ್ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.