ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಗಿ ಹೈಕೋರ್ಟ್ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ (Vivek Subbareddy) ಅವರು ಪುನರಾಯ್ಕೆಯಾಗಿದ್ದಾರೆ.
ಸಂಘದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿವೇಕ್ ರೆಡಿ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಹೈಕೋರ್ಟ್ ವಕೀಲ ಎಚ್.ವಿ. ಪ್ರವೀಣ್ ಗೌಡ ಆಯ್ಕೆಯಾಗಿದ್ದಾರೆ.
ಮೆಯೋ ಹಾಲ್, ಮ್ಯಾಜಿಸ್ಟ್ರೇಟ್ ಕೋರ್ಟ್, ಸಿಟಿ ಸಿವಿಲ್ ಮತ್ತು ಹೈಕೋರ್ಟ್ ಸೇರಿದಂತೆ ನಾಲ್ಕೂ ಘಟಕಗಳ ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಗೆ ಇದೇ ವೇಳೆ ಚುನಾವಣೆ ನಡೆಯಿತು.
ಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ 6,820 ಮತಗಳನ್ನು ಪಡೆಯುವ ಮೂಲಕ ವಿವೇಕ್ ಸುಬ್ಬಾರೆಡ್ಡಿ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಚುನಾವಣೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿ ಮತ ಚಲಾಯಿಸಿದ್ದರು.
ನಿಕಟಪೂರ್ವ ಅಧ್ಯಕ್ಷರಾಗಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು 2,302 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
4,518 ಮತ ಗಳಿಸುವ ಮೂಲಕ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ 2ನೇ ಸ್ಥಾನ ಪಡೆದುಕೊಂಡರು.
ದೊಡ್ಡಬಳ್ಳಾಪುರದಲ್ಲಿ ಸಂಭ್ರಮ
ವಕೀಲರ ಸಂಘಕ್ಕೆ ವಿವೇಕ್ ಸುಬ್ಬಾರೆಡ್ಡಿ ಅವರ ಮರು ಆಯ್ಕೆ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ದೊಡ್ಡಬಳ್ಳಾಪುರದ ವಕೀಲರು ( ಟೀಂ -VSR) ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು
ಈ ವೇಳೆ ಟೀಂ -VSR ವಕೀಲರಾದ ರವಿಕುಮಾರ್.ಜಿ.ಟಿ., ಎಂ.ವಿ. ಮುರಳಿಧರ್, ಕನಕರಾಜು, ಬಿ.ಎನ್., ನಾಗರಾಜ್ ಗೌಡ, ಮುನಿರಾಜು, ಡಿ.ಕೆ. ಲಕ್ಷ್ಮಿನಾರಾಯಣ, ರಾಜು ಚೌಡಪ್ಪ, ಎಲೆ ಪೇಟೆ ಮುನಿರಾಜು, ಕಾಂತರಾಜು, ಕೆ. ಜಗನ್ನಾಥ, ತೇಜಸ್ ಮತ್ತಿತರರಿದ್ದರು.