Site icon Harithalekhani

ವಿದ್ಯಾರ್ಥಿ ಸಾವಿನ ನಂತರ ಹೆಚ್ಚೆತ್ತ ಅಧಿಕಾರಿಗಳು; ಕೃಷಿ ಹೊಂಡಗಳಿಗೆ ತಂತಿ ಬೇಲಿ ನಿರ್ಮಿಸಿ ಅನಾಹುತ ತಪ್ಪಿಸುವಂತೆ ಮನವಿ

Build wire fence for Krushi honda and avoid disaster

Build wire fence for Krushi honda and avoid disaster

ಬೆಂ.ಗ್ರಾ.ಜಿಲ್ಲೆ: ಗೆಳೆಯರೊಂದಿಗೆ ತೋಟಕ್ಕೆ ತೆರಳಿದ ಬಾಲಕ ಕೃಷಿಹೊಂಡದಲ್ಲಿ (Krushi Honda) ಈಜಲು ಹೋಗಿ, ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಇದೇ ತಿಂಗಳ 15 ರಂದು ದೊಡ್ಡಬಳ್ಳಾಪುರ ತಾಲೂಕಿನ ಗಂಟಿಗಾನಹಳ್ಳಿ ಹೊರವಲಯದಲ್ಲಿ ನಡೆದಿದೆ

ಮೃತ ಬಾಲಕನನ್ನು ತೂಬಗೆರೆ ನಿವಾಸಿ ವೀರಾಜು ಅವರ ಪುತ್ರ 14 ವರ್ಷದ ನಾಗೇಶ್ ಎಂದು ಗುರುತಿಸಲಾಗಿದೆ.

ಮೃತನನ್ನು ತೂಬಗೆರೆಯ ಸರ್ಕಾರಿ ಶಾಲೆಯಲ್ಲಿ 09 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಹೆಚ್ಚೆತ್ತ ಕೃಷಿ ಇಲಾಖೆ ಅಧಿಕಾರಿಗಳು

ಈ ಘಟನೆ ಬೆನ್ನಲ್ಲೇ ಹೆಚ್ಚೆತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಹೊಂಡದ ಬಳಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ‌.

ಈ ಕುರಿತು ಪ್ರಕಟಣೆ ನೀಡಿದ್ದು, ಬೇಸಿಗೆ ಪ್ರಾರಂಭವಾಗಿದ್ದು, ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಮತ್ತು ಜಾನುವಾರುಗಳು ನೀರು ಕುಡಿಯಲು ಬಂದಂತಹ ಸಂದರ್ಭದಲ್ಲಿ ಬೀಳುವ ಸಂಭವವಿದ್ದು, ಈ ಹಿಂದೆ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಕೃಷಿ ಇಲಾಖೆ ರೈತರಲ್ಲಿ ಮನವಿ ಮಾಡಿದೆ.

ಕೃಷಿ ಇಲಾಖೆಯ ಬಹುಪಯೋಗಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಅನುಷ್ಟಾನ ಮಾಡಲಾಗಿರುತ್ತದೆ.

ಬೇಸಾಯ ಮಾಡುವ ರೈತರಿಗೆ ನೀರಿನ ಸಂಗ್ರಹಣೆಗಾಗಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಿಲಾಗಿರುತ್ತದೆ. ತದನಂತರ ತೋಟಗಾರಿಕಾ/ನರೇಗಾ ಯೋಜನೆಯಡಿ ಕೂಡ ಕೃಷಿ ಹೊಂಡಗಳ ನಿರ್ಮಾಣವಾಗಿರುತ್ತವೆ.

ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಅಳವಡಿಸದೆ ಇರುವದರಿಂದ ಕೃಷಿ ಹೊಂಡಗಳಲ್ಲಿ ಜೀವ ಹಾನಿಯಾಗುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಈ ಕುರಿತು ರೈತರಲ್ಲಿ ಅರಿವು ಮೂಡಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.

ಕೃಷಿ ಹೊಂಡದ ಸುತ್ತಲು ತಂತಿ ಬೇಲಿ / ನೆರಳು ಪರದೆ / ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಬೇಲಿ ಆಳವಡಿಸುವುದು ಕಡ್ಡಾಯವಾಗಿರುತ್ತದೆ. ಕೃಷಿ ಹೊಂಡದ ಮುಂದೆ “ಅಪಾಯ” ಮತ್ತು “ಈಜಬಾರದು” ಎಂಬ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಲು ಈ ಮೂಲಕ ತಿಳಿಸಿದೆ.

ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟ್ಯೂಬ್‌ಗಳನ್ನು ನಾಲ್ಕೂ ಮೂಲೆಗಳಲ್ಲಿ ಇಳಿ ಬಿಡಲು ತಿಳಿಸಿದೆ.

ಈ ನಿಟ್ಟಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನಲ್ಲಿರುವ ಮುಖ್ಯವಾಗಿ ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಎಲ್ಲಾ ಕೃಷಿ ಹೊಂಡಗಳಿಗೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು.

ರೈತರು ತಮ್ಮ ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮಗಳನ್ನು ಆಳವಡಿಸಿ ಪ್ರಾಣ ಹಾನಿಯನ್ನು ತಪ್ಪಿಸಲು ಸಹಕರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version