ದೊಡ್ಡಬಳ್ಳಾಪುರ (Doddaballapura): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಇಂಡೋ ಗ್ಲೋಬಲ್ ನರ್ಸಿಂಗ್ ಕಾಲೇಜು ಮತ್ತು ಹೆಸರುಘಟ್ಟ ಎಸ್.ವಿ. ಇನ್ಸ್ಟಿಟ್ಯೂಷನ್ ಆಫ್ ನರ್ಸಿಂಗ್ ಸಹಯೋಗದಲ್ಲಿ ವಿಶ್ವ ಮೂರ್ಛೆ ರೋಗ ದಿನಾಚರಣಿ ಅಂಗವಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕ ಆಸ್ಪತ್ರೆ ಬಳಿಯಿಂದ ಡಿ.ಕ್ರಾಸ್ ವರೆಗೆ ಜಾಥಾ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಮೂರ್ಛೆ ರೋಗದ ಬಗ್ಗೆ ಇರುವ ಮೂಢ ನಂಬಿಕೆ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವಂತೆ ಅರಿವು ಮೂಡಿಸಲಾಯಿತು.
ಜಾಥಾಗೆ ಚಾಲನೆ ನೀಡಿದ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಅಪಸ್ಮಾರ ಅಥವಾ ಮೂರ್ಛೆ ರೋಗವು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ನಿರಂತರ ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನಗಳಲ್ಲಿ ಬದಲಾವಣೆ, ತಲೆ ತಿರುಗುವುದು, ವಾಕರಿಕೆ, ಅನಿಯಂತ್ರಿತ ಚಲನವಲನ, ಅತಿಯಾದ ಬೆವರಿಕೆ, ಉಸಿರಾಟದ ತೊಂದರೆ ಅಂತಹ ಲಕ್ಷಣಗಳು ಮೂರ್ಛೆ ರೋಗಕ್ಕೆ ಸಂಬಂದಿಸಿದೆ.
ಆಗ ನಿರ್ಲಕ್ಷ ವಹಿಸದೇ ತಕ್ಷಣ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.ಆದರೆ ಮೂರ್ಛೆ ರೋಗದ ಬಗ್ಗೆ ಬಹಳಷ್ಟು ಮೂಢ ನಂಬಿಕೆ ತಪ್ಪು ಕಲ್ಪನೆಗಳಿದ್ದು, ಹಲವಾರು ಜನರು ಇದನ್ನು ಶಾಪ ಎಂದು ನಂಬುತ್ತಾರೆ.
ಅವೈಜ್ಞಾನಿಕ ಚಿಕಿತ್ಸೆಗಳಿಂದಾಗಿ ರೋಗಿಗೆ ಪ್ರಾಣಾಪಾಯವಾಗುವ ಸಂಭವವಿದೆ. ಅಪಸ್ಮಾರ ಅಥವಾ ಎಪಿಲೆಪ್ಸಿ ದೀರ್ಘಕಾಲದ ಮಿದುಳಿನ ಅಸ್ವಸ್ಥತೆಯಾಗಿದೆ. ಇದು ಮರುಕಳಿಸುವುದರಿಂದ ಫಿಟ್ಸ್‌ಗೆ ಕಾರಣವಾಗುತ್ತದೆ.
ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುವ ಅಪಸ್ಮಾರ ರೋಗವು ಮನುಷ್ಯನ ಜೀವಕ್ಕೇ ಅಪಾಯವನ್ನು ತಂದೊಡ್ಡುವ ಸಾಧ್ಯತೆಗಳಿರುತ್ತವೆ.
ಮೂರ್ಛೆ ಬಂದಾಕ್ಷಣ ರೋಗಿಯ ದೇಹದ ಯಾವುದೇ ಭಾಗಕ್ಕೆ ಅಪಾಯವಾಗದಂತೆ ನೋಡಿಕೊಳ್ಳುವುದು, ಕಲ್ಲು, ನೀರು, ಬೆಂಕಿ ಮುಂತಾದವುಗಳಿಂದ ದೂರವಿರಿಸಬೇಕು.
ಉಸಿರಾಟ ಸರಾಗವಾಗುವಂತೆ ನೋಡಿಕೊಳ್ಳುವುದು, ನಾಲಿಗೆ ಕಚ್ಚಿಕೊಳ್ಳದಂತೆ ತಡೆಯವುದು, ವ್ಯಕ್ತಿಯನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು, ವ್ಯಕ್ತಿಯ ಸುತ್ತ ಗುಂಪು ಗೂಡದಂತೆ ತಡೆಯಬೇಕು, ಪ್ರಥಮ ಚಿಕಿತ್ಸೆಯ ಕ್ರಮಗಳನ್ನು ನೀಡಬೇಕಿದೆ.
ಮೂರ್ಛೆರೋಗದ ವ್ಯಕ್ತಿಯು ಸಾಮಾನ್ಯರಂತೆ ಜೀವನ ನಡೆಸಲು ಸಮುದಾಯದ ಸಹಕಾರ ಅಗತ್ಯ ಎಂದು ತಿಳಿಸಿದರು.
ಜಾಥಾದಲ್ಲಿ ಪಾಲ್ಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳುವಿಕೆಯ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಕಾರ್‍ಯಕ್ರಮದಲ್ಲಿ ಜಿ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ನಾಗರಾಜ್ ಹಾಗೂ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಶೈಲಜಾ, ಆಡಿಯೋಲಜಿಸ್ಟ ದಿನೇಶ್, ಆಸ್ಪತ್ರೆಯ ಕಚೇರಿ ವ್ಯವಸ್ಥಾಪಕ ನಾರಾಯಣ ಕಭಿ ತಂಡ ಮತ್ತು ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.