ದೊಡ್ಡಬಳ್ಳಾಪುರ (Doddaballapura); ತಾಲ್ಲೂಕು ಕಚೇರಿಯಲ್ಲಿನ ಮುಜರಾಯಿ ಇಲಾಖೆಗೆ ಸೇರಿರುವ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಹಶೀಲ್ದಾರ್ ಅವರ ಸಹಿ ನಕಲಿ ಮಾಡಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಾಸಲು ಹೋಬಳಿ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಲೆಕ್ಕಪತ್ರಗಳ ಪರಿಶೀಲನೆ ವೇಳೆ ಮುಜರಾಯಿ ಇಲಾಖೆಯ ಖಾತೆಯಲ್ಲಿ ಹಣ ಇಲ್ಲದೆ ಇರುವ ಬಗ್ಗೆ ಅನುಮಾನಗೊಂಡ ತಹಶೀಲ್ದಾರ್ ವಿಭಾವಿದ್ಯಾರಾಥೋಡ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ತನಿಖೆ ನಡೆಸಿದ್ದ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಬೆಂಗಳೂರಿನ ಮಹಾಲಕ್ಷ್ಮೀಪುರನ ಕೆನರಾ ಬ್ಯಾಂಕ್ ಕುರುಬರಹಳ್ಳಿ ಶಾಖೆಯಲ್ಲಿನ ಸುಶೀಲಮ್ಮ ಎಂಬುವವರ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ದೊರೆತಿತ್ತು.
ನಿಖರವಾದ ಅಂಕಿಅಂಶ..?
ಈ ಪ್ರಕರಣ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ತಹಶಿಲ್ದಾರ್ ವಿಭಾವಿದ್ಯಾರಾಥೋಡ್, 2023 ರಿಂದ ಹೇಮಂತ್ ಕುಮಾರ್ ಮುಜರಾಯಿ ಇಲಾಖೆಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಅಂದಿನಿಂದ ಇಲ್ಲಿಯವರೆಗೆ ಮೂರು ಜನ ತಹಶೀಲ್ದಾರ್ ಅವರ ಸಹಿಗಳನ್ನು ನಕಲಿ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಪೊಲೀಸರು ಬ್ಯಾಂಕ್ ಅಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಯಾವ ಖಾತೆಗಳಿಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ತನಿಖೆ ಮುಕ್ತಾಯವಾದ ನಂತರ ಹಣ ವರ್ಗಾವಣೆಯ ನಿಖರವಾದ ಅಂಕಿಅಂಶ ದೊರೆಯಲಿದೆ ಎಂದಿದ್ದಾರೆ.
ತಹಶಿಲ್ದಾರ್ ಸಹಿ ಅಷ್ಟು ಸುಲಭವೇ..!
ಇನ್ನೂ ಪೊಲೀಸ್ ಮೂಲಗಳ ಮಾಹಿತಿ ಅನ್ವಯ ಮುಜರಾಯಿ ಇಲಾಖೆಯ ಲಕ್ಷಾಂತರ ರೂ ಬೇರೆ ಬೇರೆ ಖಾತೆಗೆ ವರ್ಗಾವಣೆಯಾಗಿದೆ ಎಂದು ತಿಳಿದು ಬಂದಿದೆ. ಹಾಗಾದರೆ ದೊಡ್ಡಬಳ್ಳಾಪುರ ತಹಶಿಲ್ದಾರ್ ಸಹಿ ಅಷ್ಟು ಸುಲಭವಾಗಿ ಬಳಸಬಹುದೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿ ದಂಡಾಧಿಕಾರಿಯ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸುವುದು, ನಕಲಿ ಸಹಿ ಮೂಲಕ ಹಣ ವರ್ಗಾವಣೆ ಮಾಡಿದರು. ತಹಶಿಲ್ದಾರ್ ಅರಿವಿಗೆ ಬಾರದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೊಡ್ಡಬಳ್ಳಾಪುರದ ಶಕ್ತಿ ಕೇಂದ್ರವಾದ ತಾಲೂಕು ಕಚೇರಿ ಹಲವು ತಿಂಗಳಿಂದ ಬರೀ ಇಂತಹ ನಕಾರಾತ್ಮಕ ವಿಷಯಗಳಿಂದಲೇ ಚರ್ಚೆಗೆ ಕಾರಣವಾಗುತ್ತಿರುವುದು ವಿಪರ್ಯಾಸ.