ಬೆಂಗಳೂರು: ನಿರಂತರ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಕೂಡಲೇ ರಾಜ್ಯ ಸರ್ಕಾರ ಏರಿಕೆ ಮಾಡಿರುವ ಮೆಟ್ರೋ ರೈಲು ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ಜೆಡಿಎಸ್ (JDS) ಒತ್ತಾಯ ಮಾಡಿದೆ.
ಈ ಬಗ್ಗೆ ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ
ರಮೇಶ್ ಗೌಡ ನೇತೃತ್ವದಲ್ಲಿ ಬೆಂಗಳೂರು ಮೆಟ್ರೋ ಸಂಸ್ಥೆ ಅಧಿಕಾರಿಗಳಿಗೆ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ ಅವರು; ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಎಲ್ಲಾ ಕಾಮಗಾರಿಗಳು ಅಮೇವೇಗದಲ್ಲಿ ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ. ಸರ್ಕಾರದಲ್ಲಿ ಹಣ ಇಲ್ಲ. ಮೆಟ್ರೋ ಪ್ರಯಾಣ ದರ ಏರಿಕೆಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಮಧ್ಯಮ, ಬಡ ವರ್ಗದವರಿಗೆ ಸಮಸ್ಯೆಯಾಗಿದೆ. 100% ದರ ಏರಿಕೆ ಮಾಡಲಾಗಿದೆ. ಸರಕಾರಕ್ಕೆ ಸಾರ್ವಜನಿಕರ ಬಗ್ಗೆ ಕಾಳಜಿ ಇದ್ದರೆ ಕಡಿಮೆ ಮಾಡಲಿ. ಪೆಟ್ರೋಲ್, ಡಿಸೇಲ್ ಪ್ರತಿಯೊಂದರ ದರ ಏರಿಕೆಯಾಗಿದೆ.
100% ದರ ಹೆಚ್ಚಳ ಮಾಡಿದರೆ ಜನರು ಹೇಗೆ ಬದುಕಬೇಕು? ಪ್ರಯಾಣ ದರ ದುಬಾರಿ ಆಗಿರುವುದರಿಂದ ಜನರು ಮೆಟ್ರೋದಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕೂಡಲೇ ಏರಿಕೆ ಮಾಡಿರುವ ದರವನ್ನು ಹಿಂಪಡೆಯಬೇಕು. ಈ ಹಿಂದೆ ಚೆನ್ನೈನಲ್ಲಿ ಇದೇ ರೀತಿ ದರ ಏರಿಕೆ ಮಾಡಿದ್ದರು. ಜನಾಕ್ರೋಶದ ಬೆನ್ನಲ್ಲೇ ಕಡಿಮೆ ಮಾಡಿದ್ದರು.
ರಾಜ್ಯ ಸರಕಾರ ದರ ಕಡಿಮೆ ಮಾಡದೇ ಇದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಇಲ್ಲದಿದ್ರೆ ಸಿಎಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.