Daily story: ಒಂದು ಸಾರಿ ಕೃಷ್ಣ ಮತ್ತು ಅರ್ಜುನ ನಗರ ಸಂಚಾರ ಮಾಡುತ್ತಿದ್ದರು. ಅದು-ಇದು ಮಾತನಾಡುತ್ತಾ ಹೋಗುತ್ತಿದ್ದರು.
ಒಂದು ದಿನ ಇದ್ದಕ್ಕಿದ್ದಂತೆ ಕೃಷ್ಣ ಏನೋ ನೆನಪಾದವನಂತೆ , “ಅರ್ಜುನ ನೀ ಏನೇ ಹೇಳು ಕರ್ಣನಂತಹ ದಾನಿಗಳು ಯಾರು ಇಲ್ಲ ಅಲ್ವಾ ?” ಎಂದು ಕೇಳಿದ.
ಈ ಮಾತುಗಳನ್ನು ಕೇಳಿ ಅರ್ಜುನನಿಗೆ ಅವನ ಮೈಯನ್ನು ಯಾರೋ ಪರಚಿದಂತಾಯ್ತು. ಕೃಷ್ಣನೂ, ಬೇಕೆಂದೇ ಕೆಣಕಿ ಹೇಳಿದ್ದು.
ಅರ್ಜುನನಿಗೆ ಕರ್ಣನ ಹೆಸರು ಕೇಳಿದರೆ ಆಗದು. ಈ ವಾಸುದೇವ ಯಾವಾಗಲೂ ಕರ್ಣನನ್ನು ವಹಿಸಿಕೊಂಡು ಏಕೆ ಮಾತನಾಡುತ್ತಾನೆ ? ಎಂದು ಮನಸ್ಸಿನಲ್ಲಿ ಅಂದುಕೊಂಡು, “ಅಲ್ಲ ಕೃಷ್ಣ , ನಾನು ಬೇಕಾದಷ್ಟು ದಾನ ಮಾಡುತ್ತೇನೆ.
ಅದರಲ್ಲಿ ಕರ್ಣನದ್ದೇನು ಹೆಚ್ಚುಗಾರಿಕೆ ನನಗಂತೂ ಅರ್ಥ ಆಗ್ಲಿಲ್ಲ “ಎಂದು ಸ್ವಲ್ಪ ಅಸಮಧಾನದಿಂದಲೇ ಹೇಳಿದ.
ಕೃಷ್ಣ ಕಿರುನಗೆ ಬೀರೀ, ಅರ್ಜುನನ್ನು ಓರೆಗಣ್ಣಿನಿಂದ ನೋಡುತ್ತಾ, ಆಯ್ತಪ್ಪ ಹಾಗಾದ್ರೆ ನೀನು ಒಂದು ಕೆಲಸ ಮಾಡು. ಆಗೋ ಅಲ್ಲಿ ನೋಡು ಎದುರುಗಡೆ ಎರಡು ದೊಡ್ಡ ಬೆಟ್ಟಗಳಿವೆ. ಅದನ್ನು ಬಂಗಾರದ ಬೆಟ್ಟವನ್ನಾಗಿ ಮಾಡುತ್ತೇನೆ.
ನೀನು, ನಿಮ್ಮ ಊರಿನವರನ್ನೆಲ್ಲ ಕರೆದು ಬಂಗಾರವನ್ನು ದಾನ ಮಾಡು, ಆದರೆ ಅದರಲ್ಲಿ ಒಂದು ಚೂರು ನೀನು ತೆಗೆದುಕೊಳ್ಳುವಂತಿಲ್ಲ ಎಂದನು.
ಅರ್ಜುನನು ಆಯ್ತು ಕೃಷ್ಣ, ನೀನು ಹೇಳಿದ ಹಾಗೆ ಮಾಡುತ್ತೇನೆ ಎಂದು ತನ್ನ ಗ್ರಾಮಕ್ಕೆ ಹೋಗಿ, “ಎಲ್ಲರೂ ಬನ್ನಿ ನಾನು ಬಂಗಾರ ದಾನ ಮಾಡುತ್ತೇನೆ” ಎಂದ.
ಊರವರೆಲ್ಲ ಬಂಗಾರ ಎಂದು ಕೂಡಲೇ ಗುಂಪುಗುಂಪಾಗಿ ಬಂದರು.ಅರ್ಜುನನು ಬೆಟ್ಟವನ್ನು ಮೊಗೆದು, ಮೊಗೆದು ಬಂಗಾರ ಕೊಡುತ್ತಿದ್ದನು.
ಬಂಗಾರ ತಗೊಂಡು ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿ ಹೋಗುತ್ತಿದ್ದರು. ಮತ್ತು ಕೆಲವರು “ಅರ್ಜುನಾ, ನಿನ್ನಂತಹ ದಾನಿಗಳು ಜಗತ್ತಿನಲ್ಲಿ ಯಾರೂ ಇಲ್ಲ” ಎಂದು ಹಾಡಿ ಹೊಗಳುತ್ತಿದ್ದರು.
ಇದನ್ನೆಲ್ಲಾ ಕಂಡು, ಕೇಳಿ, ಅರ್ಜುನನಿಗೆ ತನ್ನ ಬಗ್ಗೆ ತನಗೆ ಹೆಮ್ಮೆ ಅನಿಸಿತು. ಎರಡು ಮೂರು ದಿನಗಳಿಂದ ಬಿಡುವಿಲ್ಲದೆ ದಾನ ಕೊಡುತ್ತಲೇ ಇದ್ದಾನೆ.
ಊರಿನವರು, ಅಕ್ಕ- ಪಕ್ಕದೂರಿನವರು ಬಂಗಾರವನ್ನು ಮನೆಯ ಪೆಟ್ಟಿಗೆ, ಬೀರು, ಪೆಟಾರಿ, ಕೊನೆಗೆ ಬಟ್ಟೆಗಳಲ್ಲಿ ಗಂಟು ಕಟ್ಟಿಟ್ಟು, ಬಂದು ಬಂದು ತೆಗೆದುಕೊಂಡು ಹೋಗುತ್ತಿದ್ದರು.
ತೆಗೆದುಕೊಂಡು ಹೋದವರು ಬಂಗಾರದ ಆಸೆಗಾಗಿ ಮತ್ತೆ ಮತ್ತೆ ಬರುತ್ತಿದ್ದರು. ಅರ್ಜುನನು ಕೊಡುತ್ತಲೇ ಇದ್ದನು. ಇಷ್ಟೆಲ್ಲಾ ಕೊಟ್ಟರೂ ಬೆಟ್ಟದ ಬಂಗಾರ ಒಂದು ಗುಲಗಂಜಿ ತೂಕದಷ್ಟು ಕಡಿಮೆಯಾಗಲಿಲ್ಲ. ಎಷ್ಟು ಬಂಗಾರ ಅಗೆದು ಮೊಗೆದು ಕೊಟ್ಟರೂ, ಮತ್ತೆ ಅಷ್ಟೇ ಆಗುತ್ತಿತ್ತು.
ಅರ್ಜುನನು ಕೊಟ್ಟು ಕೊಟ್ಟು ಸೋತು ಹೈರಾಣಾದ. ಮೂರ್ನಾಲ್ಕು ದಿನಗಳಿಂದ ನಿದ್ದೆ ಇಲ್ಲ, ಆಹಾರ ಸರಿಯಾಗಿ ತಿಂದಿಲ್ಲ, ವಿಶ್ರಾಂತಿಯ ಮಾತಂತೂ ಇಲ್ಲವೇ ಇಲ್ಲ. ಸುಸ್ತಾದ ಅರ್ಜುನನು ಕೃಷ್ಣಾ, ನನ್ನ ಕೈಲಿ ಇನ್ನು ಬಂಗಾರ ಕೊಡಲು ಆಗುವುದಿಲ್ಲ. ನನಗೆ ವಿಶ್ರಾಂತಿಯ ಅಗತ್ಯವಿದೆ ಎಂದನು.
ಕೃಷ್ಣನು ಹೌದೌದು, ಅರ್ಜುನ ನೀನು ಬಹಳ ದಣಿದಿದ್ದಿ ವಿಶ್ರಾಂತಿ ತೊಗೋ ಎಂದು ಹೇಳಿದ.
ಅದರ ಮರುದಿನವೇ, ಕೃಷ್ಣನು, ಕರ್ಣನು ಬರುವುದನ್ನು ನೋಡಿ ಅವನನ್ನು ಕರೆದು, “ನೋಡು ಕರ್ಣ, ಅಲ್ಲಿ ಎರಡು ಬಂಗಾರದ ಬೆಟ್ಟಗಳಿವೆ. ಅವುಗಳನ್ನು ಯಾರಿಗೆ ಬೇಕು ಅವರಿಗೆ ದಾನ ಮಾಡು. ಆದರೆ ನೀನು ಮಾತ್ರ ಒಂದು ಚೂರು ತೆಗೆದುಕೊಳ್ಳುವಂತಿಲ್ಲ”, ಎಂದು ಹೇಳಿ ಹೊರಟನು.
ಕರ್ಣನು ಆಯ್ತು ಕೃಷ್ಣ ಎಂದವನೇ, ತನ್ನ ಗ್ರಾಮಕ್ಕೆ ಬಂದು, ಗ್ರಾಮದ ಜನಗಳನ್ನೆಲ್ಲಾ ಕರೆದು “ನೋಡಿ ಅಲ್ಲಿ ಎರಡು ಬಂಗಾರದ ಬೆಟ್ಟ ಇದೆ. ನಿಮಗೆ ಎಷ್ಟು ಬೇಕಾದರೂ ಅಷ್ಟು ಬಂಗಾರ ತೆಗೆದುಕೊಂಡು ಹೋಗಿ” ಎಂದು ಹೇಳಿ ಒಂದು ಕ್ಷಣವೂ ನಿಲ್ಲದೆ, ತಿರುಗಿಯೂ ನೋಡದೆ, ಹೊರಟುಬಿಟ್ಟ.
ಮರೆಯಲ್ಲಿ ನಿಂತು ನೋಡುತ್ತಿದ್ದ ಕೃಷ್ಣನು, ಅರ್ಜುನನಿಗೆ ತೋರಿಸಿ “ನೋಡಿದೆಯಾ? ಅವನಿಗೆ ಯಾರ ಹೊಗಳಿಕೆ ಆಗಲಿ, ಕೊಟ್ಟಿದ್ದೇನೆ ಎಂಬ ಅಹಂ ಆಗಲಿ, ನನ್ನದು ಎಂಬ ಸ್ವಾರ್ಥವಾಗಲಿ, ಯಾವುದೂ ಇಲ್ಲ. ಇದಕ್ಕಾಗಿಯೇ ಕರ್ಣನನ್ನು ಮಹಾದಾನಿ ಎಂದು ಎಲ್ಲರೂ ಹೇಳುವುದು” ಎಂದು ಹೇಳಿದಾಗ ಅರ್ಜುನನು ನಾಚಿಕೆಯಿಂದ ತಲೆ ತಗ್ಗಿಸಿದನು.
ಕೃಪೆ: ಆಶಾ ನಾಗಭೂಷಣ. (ಸಾಮಾಜಿಕ ಜಾಲತಾಣ)