Site icon Harithalekhani

ಸರ್ಕಾರಿ ನೌಕರರ ಅಧ್ಯಕ್ಷ ಬೀದಿಗಿಳಿದು ಹೋರಾಟ ಮಾಡಬೇಕು: ಆರ್‌.ಅಶೋಕ

President of Government Employees should take to the streets and fight: R. Ashoka

President of Government Employees should take to the streets and fight: R. Ashoka

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ. ಒಂದೆಡೆ ಮರಳು ಮಾಫಿಯಾ ಕೈಯಲ್ಲಿ ಸರ್ಕಾರ ಸಿಲುಕಿದ್ದರೆ, ಮತ್ತೊಂದೆಡೆ ಮೈಸೂರಿನಲ್ಲಿ ಗಲಭೆಕೋರರ ಪರವಾಗಿ ಸಚಿವರು ಮಾತಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮುಂಭಾಗ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.

ಮೈಸೂರಿನಲ್ಲಿ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಮುಸ್ಲಿಂ ಮತಾಂಧರು ದಾಳಿ ಮಾಡಿದರೂ ಪೊಲೀಸರಿಗೆ ರಕ್ಷಣೆ ನೀಡಿಲ್ಲ. ಇಂತಹ ಘಟನೆಗಳಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿದಿದೆ. ನಿಷ್ಠಾವಂತ ಅಧಿಕಾರಿಗಳು ಹಾಗೂ ಪೊಲೀಸರಿಗೆ ರಕ್ಷಣೆ ನೀಡಿ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನಿಷ್ಠಾವಂತ ಅಧಿಕಾರಿಗಳನ್ನು ಕಾಪಾಡಬೇಕಾದ ವಿಧಾನಸೌಧ ಮೌನ ಸೌಧವಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಜಿ ಸಿಎಂ ಕೆಂಗಲ್‌ ಹನುಮಂತಯ್ಯ ಬರೆಸಿದ್ದಾರೆ. ಕಾಂಗ್ರೆಸ್‌ನಿಂದಾಗಿ ಇದು ದೆವ್ವಗಳ ಕೆಲಸ ಎಂಬಂತಾಗಿದೆ.

ಭದ್ರಾವತಿಯಲ್ಲಿ ಮರಳು ಮಾಫಿಯಾ ತಡೆಯಲು ಹೋದ ಮಹಿಳಾ ಅಧಿಕಾರಿಯ ಮೇಲೆ ಲಾರಿ ಹತ್ತಿಸಿ ಕೊಲ್ಲುವುದಾಗಿ ಶಾಸಕರ ಮಗ ಜೀವ ಬೆದರಿಕೆ ಹಾಕಿದ್ದಾನೆ. ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಮಾಫಿಯಾ ಕೈಯಲ್ಲಿ ಸರ್ಕಾರ ಸಿಲುಕಿರುವುದರಿಂದ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಎಫ್‌ಐಆರ್‌ನಲ್ಲಿ ಶಾಸಕ ಸಂಗಮೇಶ್‌ ಪುತ್ರನ ಹೆಸರಿಲ್ಲ. ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹೇಳಿಕೆ ನೀಡುವ ಬದಲು ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಮೈಸೂರಿನಲ್ಲಿ ಯಾರನ್ನೂ ಬಂಧಿಸಿಲ್ಲ.

ಇಡೀ ಸರ್ಕಾರ ಗಲಭೆಕೋರರ ಪರವಾಗಿ ನಿಂತಿದೆ. ಅದರ ಬದಲು ಪೊಲೀಸ್‌ ಅಧಿಕಾರಿಗಳನ್ನೇ ಟೀಕಿಸಲಾಗುತ್ತಿದೆ. ಮುಸ್ಲಿಮರಿಂದ ಗೆದ್ದ ಸಚಿವರು ಅವರ ಪರವಾಗಿ ಮಾತಾಡುತ್ತಿದ್ದಾರೆ ಎಂದರು.

ಭದ್ರಾವತಿಯ ಮಹಿಳಾ ಅಧಿಕಾರಿಯ ಮೇಲೆ ಒತ್ತಡ ಹೇರಲಾಗಿದೆ. ಆ ಭಯದಿಂದಲೇ ಅವರು ಯಾರ ಮೇಲೂ ದೂರು ನೀಡಿಲ್ಲ. ದೂರು ಕೊಟ್ಟರೂ ಸರ್ಕಾರ ಅಧಿಕಾರಿಯ ಪರವಾಗಿ ನಿಲ್ಲುವುದಿಲ್ಲ.

ಪೊಲೀಸ್‌ ಅಧಿಕಾರಿಗೆ ಸ್ಟಾರ್‌ ಕೊಟ್ಟವರು ಯಾರು ಎಂದು ಸಚಿವ ರಾಜಣ್ಣ ಪ್ರಶ್ನೆ ಮಾಡಿದ್ದಾರೆ. ಪೊಲೀಸರಿಗೆ ಜನರು ಸ್ಟಾರ್‌ ನೀಡಿದ್ದಾರೆ. ಅವರಿಗೆ ಜನರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆಯೇ ಹೊರತು, ಸಚಿವರ ಹಣದಿಂದ ನೀಡುತ್ತಿಲ್ಲ.

ಪೊಲೀಸರನ್ನು ಪ್ರಶ್ನಿಸುವುದಿದ್ದರೆ ಕಚೇರಿಯಲ್ಲಿ ಕರೆದು ಮಾತಾಡಬೇಕು. ಅದನ್ನು ಬಿಟ್ಟು ಸಾರ್ವಜನಿಕ ಸ್ಥಳದಲ್ಲಿ ಅವರನ್ನು ನಿಂದಿಸಬಾರದು. ಹೀಗೆ ಮಾಡಿದರೆ ಪೊಲೀಸರು ಆತ್ಮವಿಶ್ವಾಸದಿಂದ ಕೆಲಸ ಮಾಡುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.

Exit mobile version