Site icon Harithalekhani

ಹರಿತಲೇಖನಿ ದಿನಕ್ಕೊಂದು ಕಥೆ: ಮಿತ್ರದ್ರೋಹಿ

Daily story: mitradohi

Daily story: mitradohi

Daily story: ಅದೊಂದು ದೊಡ್ಡ ಕಾಡು. ಆ ಕಾಡಿನ ಅಂಚಿನಲ್ಲಿ ಪುಟ್ಟದಾದ ಗುಡಿಸಲಿನಲ್ಲಿ ರೈತನೊಬ್ಬ ತನ್ನ ಪುಟ್ಟ ಕುಟುಂಬದೊಡನೆ ವಾಸವಾಗಿದ್ದ.

ಕಾಡಿನ ಸ್ವಲ್ಪ ಭೂಮಿಯಲ್ಲಿ ಉಳುಮೆ ಮಾಡಿ ತನಗೆ ಬೇಕಾದ ಬೆಳೆಯನ್ನು ಬೆಳೆದುಕೊಂಡು ಜೀವನ ಮಾಡುತ್ತಿದ್ದ. ಅದೇ ಕಾಡಿನಲ್ಲಿ ತನ್ನ ಪುಟ್ಟ ಸಂಸಾರದೊಡನೆ ಜೀವನ ಮಾಡುತ್ತಿದ್ದ ಕೋತಿಯೊಂದು ಒಂದು ದಿನ ಆ ರೈತನಿಗೆ ಪರಿಚಯವಾಯಿತು.

ದಿನಗಳೆದಂತೆ ರೈತ ಮತ್ತು ಕೋತಿಯ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು. ರೈತ ತಾನು ಮಾಡಿದ ತಿಂಡಿಗಳನ್ನು ಕೋತಿಯ ಕುಟುಂಬಕ್ಕೂ ಕೊಡುತ್ತಿದ್ದ. ಅದೇ ರೀತಿ ಕೋತಿ ಕೂಡ ತಾನು ಮರ ಗಿಡಗಳಿಂದ ಕಿತ್ತು ತರುತ್ತಿದ್ದ ಹಣ್ಣು ಹಂಪಲುಗಳನ್ನು ರೈತನ ಕುಟುಂಬಕ್ಕೆ ಕೊಡುತ್ತಿತ್ತು. ಇಂತಹ ಹಂಚಿ ತಿನ್ನುವ ಉದಾತ್ತ ಗುಣ ರೈತ ಹಾಗೂ ಕೋತಿಯಲ್ಲಿ ಇನ್ನಷ್ಟು ಆತ್ಮೀಯತೆ ಬೆಳೆಸಿತ್ತು.

ಒಂದು ದಿನ ರೈತನಿಲ್ಲದಿರುವಾಗ ಅವನ ಗುಡಿಸಲಿಗೆ ಬೆಂಕಿ ಬಿತ್ತು. ಇದನ್ನು ಕಂಡ ಕೋತಿ ಕೂಡಲೇ ತನ್ನ ಕುಟುಂಬ ಸದಸ್ಯರೊಡನೆ ಅಲ್ಲೇ ಹತ್ತಿರದಲ್ಲಿದ್ದ ನದಿಯ ನೀರನ್ನು ತಂದು ಬೆಂಕಿಯನ್ನು ಆರಿಸಿ ರೈತನ ಕುಟುಂಬವನ್ನು ಪ್ರಾಣಾಪಾಯದಿಂದ ರಕ್ಷಿಸಿತು.

ಈ ಘಟನೆ ನಡೆದ ಮೇಲಂತೂ ಕೋತಿ ಮತ್ತು ರೈತ ಒಬ್ಬರನ್ನೊಬ್ಬರು ಬಿಡಲಾರದಷ್ಟು ಜೀವದ ಗೆಳೆಯರಾದರು.

ಒಮ್ಮೆ ಇವರಿಬ್ಬರೂ ಖುಷಿಯಿಂದ ಕಾಡಿನಲ್ಲಿ ತಿರುಗಾಡುತ್ತಿರಬೇಕಾದರೆ ಹುಲಿಯೊಂದು ರೈತನನ್ನು ತಿನ್ನುವ ಆಸೆಯಿಂದ ದಾಳಿ ಮಾಡಿತು.

ತಕ್ಷ ಣ ಕೋತಿ ನೀಡಿದ ಎಚ್ಚರಿಕೆಯಂತೆ ರೈತ ಮರ ಹತ್ತಿ ಕುಳಿತ. ಕೋತಿಯು ರಕ್ಷ ಣೆಗಾಗಿ ಚಂಗನೆ ಹಾರಿ ರೈತನ ಪಕ್ಕದಲ್ಲೇ ಕುಳಿತುಕೊಂಡು ‘ಗೆಳೆಯ, ನೀನೇನೂ ಹೆದರಬೇಡ. ಹುಲಿಗೆ ಮರ ಹತ್ತಲು ಬರುವುದಿಲ್ಲ. ಧೈರ್ಯವಾಗಿರು ನಾನಿದ್ದೀನಿ’ ಎಂದು ಧೈರ್ಯ ತುಂಬಿತು.

ಕೋತಿಯ ಮಾತುಗಳನ್ನು ಕೇಳಿಸಿಕೊಂಡ ಹುಲಿ ‘ಏಯ್‌ ಕೋತಿ, ಎಷ್ಟೇ ಸ್ನೇಹಿತರಾದರೂ ಮನುಷ್ಯರನ್ನು ನಂಬಬೇಡ. ಇವರು ದುಷ್ಟರು, ಸ್ವಾರ್ಥಿಗಳು, ನೀನು ಕೂಡಲೇ ಆ ರೈತನನ್ನು ಮರದ ಮೇಲಿಂದ ಕೆಳಕ್ಕೆ ನೂಕು. ಅವನನ್ನು ತಿಂದು ನನ್ನ ಹಸಿವನ್ನು ತೀರಿಸಿಕೊಳ್ಳುವೆ’ ಎಂದು ಹೇಳಿ ಘರ್ಜಿಸಿತು.

ಆದರೆ ಕೋತಿ ಮಾತ್ರ ಯಾವುದೇ ಕಾರಣಕ್ಕೂ ತನ್ನ ಗೆಳೆಯ ರೈತನನ್ನು ಹುಲಿಯ ಬಾಯಿಗೆ ಸಿಗಲು ಬಿಡುವುದಿಲ್ಲವೆಂದು ಹೇಳಿ ರೈತನ ರಕ್ಷಣೆಗೆ ನಿಂತಿತು. ಆಗ ಹುಲಿ ವಿಧಿಯಿಲ್ಲದೆ ಉಪಾಯವೊಂದನ್ನು ಹೂಡಿ ಕೋತಿಯ ವಿರುದ್ಧ ರೈತನನ್ನು ಎತ್ತಿಕಟ್ಟಿತು.

‘ನೋಡಯ್ಯ ರೈತ, ನೀನು ಉಳಿದುಕೊಳ್ಳಬೇಕೆಂದರೆ ನಿನಗಿರುವುದು ಒಂದೇ ದಾರಿ. ಆ ಕೋತಿಯನ್ನು ಮರದಿಂದ ಕೆಳಕ್ಕೆ ತಳ್ಳು. ಅದನ್ನು ತಿಂದು ನಿನ್ನನ್ನು ಬಿಟ್ಟು ನಾನು ಹೋಗುತ್ತೇನೆ’ ಎಂದು ಹೇಳಿತು ಹುಲಿ.

ಆಗ ಮಾನವ ಸಹಜ ಸ್ವಾರ್ಥದಿಂದ ರೈತ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪ್ರಾಣ ಸ್ನೇಹಿತ ಕೋತಿಯನ್ನು ಮರದ ಮೇಲಿಂದ ಕೆಳಕ್ಕೆ ದಬ್ಬಿದ.

ತಕ್ಷಣ ಜಾಗ್ರತವಾದ ಕೋತಿ ಚಂಗನೆ ಕೊಂಬೆಯಿಂದ ಕೊಂಬೆಗೆ ಹಾರಿ ಕೆಳಕ್ಕೆ ಬೀಳದೆ ತಪ್ಪಿಸಿಕೊಂಡಿತು. ಆದರೆ ರೈತ ಕಾಲು ಜಾರಿ ಮರದಿಂದ ಕೆಳಕ್ಕೆ ಬಿದ್ದ.

ಇದನ್ನೆ ಕಾಯುತ್ತಿದ್ದ ಹುಲಿ ರೈತನ ಮೇಲೆರಗಿ ಅವನನ್ನು ತಿಂದು ಮುಗಿಸಿತು. ‘ಸ್ವಾರ್ಥಿ ಮನುಷ್ಯನಿಗೆ ದೇವರೇ ಸರಿಯಾದ ಶಿಕ್ಷೆ ನೀಡಿದ’ ಎನ್ನುತ್ತಾ ಕೋತಿಯು ಇನ್ನೆಂದೂ ಇಂತಹ ಮನುಷ್ಯರ ಸ್ನೇಹ ಮಾಡಬಾರದೆಂದು ಮನಸ್ಸಿನಲ್ಲೇ ನಿರ್ಧರಿಸಿತು. ತಾನು ಬದುಕಿದ್ದಕ್ಕೆ ‘ಬದುಕಿದೆಯಾ ಬಡ ಜೀವವೇ’ ಎಂದು ನಿಟ್ಟುಸಿರು ಬಿಟ್ಟಿತು.

ಕೃಪೆ: ಬನ್ನೂರು ಕೆ.ರಾಜು (ಸಾಮಾಜಿಕ ಜಾಲತಾಣ)

Exit mobile version