ದೊಡ್ಡಬಳ್ಳಾಪುರ (Doddaballapura): ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬಿಜೆಪಿ ಮುಖಂಡರು, ಅಧ್ಯಕ್ಷರು ಒತ್ತಡ ಹೇರುತ್ತಿದ್ದಾರೆ ಎಂಬ ಜೆಡಿಎಸ್ ಹಿರಿಯ ಮುಖಂಡ ಹುಸ್ಕೂರು ಆನಂದ್ ಅವರ ಹೇಳಿಕೆಯನ್ನು ಬಿಜೆಪಿ ದೊಡ್ಡಬಳ್ಳಾಪುರ ಗ್ರಾಮಾಂತರ ಅಧ್ಯಕ್ಷ ಕೆ. ನಾಗೇಶ್ ಅಲ್ಲಗೆಳೆದಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ನಾಗೇಶ್, ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿಯ ಹಾಲಿ ನಿರ್ದೇಶಕರಾದ ಬಿಸಿ ಆನಂದ್ ಕುಮಾರ್ ಇದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ.
ನಮ್ಮಲ್ಲಿ ಪ್ರಭಾವಿ ಅಭ್ಯರ್ಥಿ ಇದ್ದಾಗ್ಯೂ ನಮ್ಮ ಪಕ್ಷದ ಮುಖಂಡರಾಗಲಿ, ಅಧ್ಯಕ್ಷರಾಗಲಿ ಯಾರು ಕೂಡ ಹುಸ್ಕೂರು ಆನಂದ್ ಅವರನ್ನು ಅಭ್ಯರ್ಥಿ ಆಗುವಂತೆ ಒತ್ತಡ ಹೇರಿಲ್ಲ.
ಹುಸ್ಕೂರ್ ಆನಂದ್ ಹಿರಿಯರು, ಅವರು ಏಕಾಏಕಿ ಈ ರೀತಿ ಎರಡು ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವಂತೆ ಹೇಳಿಕೆಯನ್ನು ನೀಡುವುದು ಸರಿಯಲ್ಲ.
ಜೆಡಿಎಸ್- ಬಿಜೆಪಿ ಮೈತ್ರಿಯನ್ನು ನಾವು ಗೌರವಿಸುತ್ತೇವೆ. ಆದರೆ ನಮ್ಮಲ್ಲಿ ಅಭ್ಯರ್ಥಿ ಇದ್ದಾರೆ. ಅವರ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ಸೂಚನೆಗೆ ಎಲ್ಲರೂ ಬದ್ದರಾಗಿರುತ್ತೇವೆ. ಹಾಗೆಂದ ಮಾತ್ರಕ್ಕೆ ಗೊಂದಲದ ಹೇಳಿಕೆಯನ್ನು ಹುಸ್ಕೂರು ಆನಂದ್ ನೀಡಬಾರದು ಎಂದು ನಾಗೇಶ್ ಮನವಿ ಮಾಡಿದರು.