ಚಿಕ್ಕಬಳ್ಳಾಪುರ: ಡಾ.ಕೆ ಸುಧಾಕರ್ (Dr K Sudhakar) ತೀವ್ರ ಆಕ್ಷೇಪದ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಂದೀಪ್ ಆಯ್ಕೆಗೆ ಪಕ್ಷದ ಹೈಕಮಾಂಡ್ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ.
ಜಿಲ್ಲಾ ಅಧ್ಯಕ್ಷ ಆಯ್ಕೆಗೆ ಪಕ್ಷದ ವರಿಷ್ಠರು ತಡೆಹಿಡಿದಿರುವ ಕಾರಣ ಕೆರಳಿರುವ ಸಂದೀಪ್ ರೆಡ್ಡಿ (Sandeep Reddy) ಇಂದು ಸುದ್ದಿಗೋಷ್ಠಿ ನಡೆಸಿದ್ದು, ಸಂಸದ ಡಾ.ಕೆ ಸುಧಾಕರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ, ನೀನಾ.. ನಾನಾ ನೋಡೇಬಿಡೋಣ ಎಂದು ಸವಾಲೆಸೆದಿದ್ದಾರೆ.
ಸಂಸದ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಪ, ತೀರಾ ದುರ್ಬಲ ವ್ಯಕ್ತಿಯಾದ ಆತನಿಗೆ ಅಸೂಯೆ ಹೆಚ್ಚು.. ಮತ್ತೊಬ್ಬರ ಬೆಳವಣಿಗೆಯನ್ನು ಸಹಿಸುವುದಿಲ್ಲ. ನೀನ್ ಒಬ್ಬನೇ ಬದುಕಬೇಕಾ, ನಿನ್ ಒಬ್ಬನದೆ ಪ್ರಪಂಚ..?, ನಿನ್ ಒಬ್ಬನದಾ ಬಿಜೆಪಿ..?, ನಿನಗೊಬ್ಬನಿಗೆನಾ ಕುಟುಂಬ ಇರೋದು.
ಇವತ್ತಿಂದ ನಿನಗೂ ನನಗೂ ಸ್ಟಾರ್ಟ್, ಭ್ರಷ್ಟಾಚಾರ ಮಾಡಬೇಡಾ.. ತಂದೆತಾಯಿಗೆ ಹೆಸರು ತರುವ ಮಗನಾಗು ಎಂದು ಮೆಸೇಜ್ ಮಾಡಿ ಹೇಳಿದೆ ಕೆಳಲಿಲ್ಲ.. ಮತ್ತೆ ಹಳೇ ಸುಧಾಕರ್ ನಾನು ಎಂಬುದು ಪ್ರೊ ಮಾಡ್ಕೊಂಡ್ರು. ಮನುಷ್ಯನಾಗಿ ಬದುಕಪ್ಪಾ, ಮತ್ತೊಬ್ಬರಿಗೆ ತೊಂದರೆ ಕೊಡಬೇಡ..
ಕೋವಿಡ್ ಟೈಮಲ್ ಜನ ಸಾಯ್ತಾ ಇರೋ ಸಂದರ್ಭದಲ್ಲಿ ಮಾಡಿರುವ ಅನಾಚಾರ, ಚೆನ್ನೈನ ಮೈಕ್ರೋ ಫೈನಾನ್ಸ್ ಒಂದಕ್ಕೆ ಹಣ ಕೊಟ್ಟಿದ್ದೀಯಾ.. ಇಲ್ಲ ಅಂತೇಳು, ನೀ ಹೇಳುದ್ರು ಅಷ್ಟೇ ನೀನಾ ನಾನ ನೋಡೋಣ.
ನೂರಾರು ಕೋಟಿ ಹಗರಣದ ತನಿಖೆ ನಡೆಸುತ್ತಿರುವ ಮೈಕಲ್ ಕುನ್ನಾ ಅವರು ಸಮಯ ನೀಡಿದರೆ ಕೋವಿಡ್ ಅಕ್ರಮದ ಬಗೆಗಿನ ದಾಖಲೆಗಳನ್ನು ನೀಡುವೆ.
ಪ್ರಜಾಪ್ರಭುತ್ವ ಯಾರಪ್ಪನ ಸ್ವತ್ತಲ್ಲ, ಪ್ರದೀಪ್ ಈಶ್ವರ್ ಯಾರ್ರಿ.. ಒಬ್ಬ ಅನಾಥ ಹುಡುಗ ಇವತ್ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ.. ನೀನು, ನಾನು, ಇನ್ನೊಬ್ಬರು ಒಪ್ಪಲೇ ಬೇಕು. ಇದು ಪ್ರಜಾಪ್ರಭುತ್ವದ ಶಕ್ತಿ. ಅಂತಾ ಹುಡುಗನ ಮೇಲೆ ಸೋತ್ರು ಇನ್ನೂ ಬುದ್ದಿ ಬಂದಿಲ್ಲ ಅಂದ್ರೆ.
ಸುಧಾಕರ್ ಪಾಪದ ಹೊರೆ ಹೆಚ್ಚಿದೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಅವರ ವಿರುದ್ಧ ಕೆಲಸ ಮಾಡಿಲ್ಲ. ತಟಸ್ಥವಾಗಿ ಇದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಿದ್ದೇನೆ. ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧ ಎಂದರು.
2007ರಿಂದಲೂ ಸುಧಾಕರ್ ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾನೆ. ನನ್ನ ಪರವಾಗಿ ಬಿಜೆಪಿಯ ಹಲವು ಮುಖಂಡರು ಇದ್ದಾರೆ. ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದರು.
ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿದರೂ ಕೆಲಸ ಮಾಡುವೆ. ಕಾರ್ಯಕರ್ತನಾಗಿಯೂ ಕೆಲಸ ಮಾಡುವೆ ಎಂದರು.