ದೊಡ್ಡಬಳ್ಳಾಪುರ (Doddaballapura): ರಸ್ತೆ ಬದಿ ನಿಲ್ಲಿಸುವ ವಾಹನಗಳ ಬ್ಯಾಟರಿ ಕದಿಯುತ್ತಿದ್ದ ಗ್ಯಾಂಗ್ ಒಂದು ಲಾರಿ ಮಾಲೀಕನ ಬುದ್ದಿವಂತಿಕೆಯಿಂದ, ತಂದಿದ್ದ ಆಟೋವನ್ನು ಬಿಟ್ಟು ಪರಾರಿಯಾಗಿರುವ ಘಟನೆ ತಾಲೂಕಿನ ತಪಸೀಹಳ್ಳಿಯಲ್ಲಿ ನಡೆದಿದೆ.
ತಪಸೀಹಳ್ಳಿ ಗ್ರಾಮದ ಸತೀಶ್ ಎನ್ನುವವರು ಟ್ಯಾಂಕರ್ ಗಳನ್ನು ಹೊಂದಿದ್ದು, ರಾತ್ರಿ ವೇಳೆ ಸ್ನೇಹಿತರ ಜಮೀನಿನಲ್ಲಿ ನಿಲ್ಲಿಸುತ್ತಾರೆ.
ಆದರೆ ಇಲ್ಲಿ ಹಲವು ಬಾರಿ ಟ್ಯಾಂಕರ್ ಗಳ ಬ್ಯಾಟರಿ ಗಳನ್ನು ಕದಿಯಲಾಗಿದ್ದು, ಸತೀಶ್ ಬದಲಿ ವ್ಯವಸ್ಥೆ ಮಾಡಿಕೊಂಡಿದ್ದರು.
ಆದರೆ ಇಂದು (ಮಂಗಳವಾರ) ಮುಂಜಾನೆ 5ಗಂಟೆಗೆ ಸಂಬಂಧಿಕರನ್ನು ಆಸ್ಪತ್ರೆಗೆ ಕರೆದೊಯ್ದು ಹಿಂತಿರುಗಿ ಗ್ರಾಮಕ್ಕೆ ಬಂದಾಗ, ಆಟೋದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಟ್ಯಾಂಕರ್ ನಿಂದ ಬ್ಯಾಟರಿ ಬಿಚ್ಚುತ್ತಿರುವುದು ಕಂಡುಬಂದಿದೆ.
ಕೂಡಲೇ ಉಪಾಯ ಮಾಡಿದ ಸತೀಶ್ ಮಿತ್ರರಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಅದಕ್ಕು ಮುನ್ನ ಸದ್ದಿಲ್ಲದೆ ಕಳ್ಳರು ಬಂದಿದ್ದ ಆಟೋ ಬಳಿ ತೆರಳಿ ಬೀಗವನ್ನು ತೆಗೆದುಕೊಂಡಿದ್ದಾರೆ.
ನಂತರ ಕಳ್ಳರನ್ನು ಹಿಡಿಯಲು ಮುಂದಾಗಿದ್ದು, ಈ ವೇಳೆ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿಗಳು ಆಟೋ ಬಿಟ್ಟು ಪರಾರಿಯಾಗಿದ್ದಾರೆ.
ವಿಪರ್ಯಾಸವೆಂದರೆ ಕಳ್ಳರು ಪರಾರಿಯಾಗುವ ವೇಳೆ ಸತೀಶ್ ಅವರ ಟ್ಯಾಂಕರ್ ಬ್ಯಾಟರಿ ಕದ್ದೋಯ್ದರೆ, ಆಟೋದಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದ ಇತರೆ ವಾಹನಗಳ 6 ಬ್ಯಾಟರಿಗಳು ದೊರೆತಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.