ದೊಡ್ಡಬಳ್ಳಾಪುರ (Doddaballapura): ಕಳೆದ ಕೆಲ ದಿನಗಳಿಂದ ಸದ್ದಿಲ್ಲದೆ ಉಳಿದ್ದ ತಾಲ್ಲೂಕಿನ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಒಂದೆಡೆ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಕಳೆಗಟ್ಟಿದ್ದರೆ, ಮತ್ತೊಂದೆಡೆ ಬಮೂಲ್ ಚುನಾವಣೆ ಮೇಲೆ ಅನೇಕರು ಚಿತ್ತ ಹರಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕಮಲ-ದಳ ಮೈತ್ರಿ ಎನ್‌ಡಿಎ ಅಭ್ಯರ್ಥಿಯಾಗಿ ಬಮೂಲ್ (ಬೆಂಗಳೂರು ಸಹಕಾರ ಹಾಲು ಒಕ್ಕೂಟ) ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ದವಾಗಿರುವುದಾಗಿ ಜೆಡಿಎಸ್ ಮುಖಂಡ ಹುಸ್ಕೂರು ಆನಂದ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈಗಾಗಲೇ ಬಮೂಲ್ ನಿರ್ದೇಶಕರಾಗಿ ರೈತ ಪರ ಕಾರ್ಯಗಳ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಿಸಿ ಆನಂದ್ ಕುಮಾರ್ ಅವರು ಈ ಬಾರಿಯು ಸ್ಪರ್ಧೆ ಬಹುತೇಕ ಖಚಿತವಾಗಿದೆ. ಆದರೆ ಇವರಿಗೆ ಮೈತ್ರಿ ಪಕ್ಷದಲ್ಲಿಯೇ ಸ್ಪರ್ಧಿ ಎಂಬಂತೆ ಹುಸ್ಕೂರು ಆನಂದ್ ಅವರು ಕಣಕ್ಕಿಳಿಯುವುದಾಗಿ ತಿಳಿಸಿರುವುದು ಕುತೂಹಲ ಕೆರಳಿಸಿದೆ.
ಇಂದು ಹರಿತಲೇಖನಿಯೊಂದಿಗೆ ಮಾತನಾಡಿದ ಹುಸ್ಕೂರು ಆನಂದ್ ಅವರು, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಬಮೂಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ಅದರಲ್ಲಿಯೂ ಬಿಜೆಪಿ ಮುಖಂಡರು, ಅಧ್ಯಕ್ಷರುಗಳು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಎನ್‌ಡಿಎ ಅಭ್ಯರ್ಥಿಯಾಗಿ ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ಸ್ಪರ್ಧೆಗೆ ಸಿದ್ದ ಎಂದು ತಿಳಿಸಿದರು.
ಬಿಜೆಪಿಯಿಂದ ಹಾಲಿ ನಿರ್ದೇಶಕ ಬಿಸಿ ಆನಂದ್ ಕುಮಾರ್ ಅವರ ಸ್ಪರ್ಧೆ ಬಹುತೇಕ ಖಚಿತವಲ್ಲವೇ ಎಂಬ ಪ್ರಶ್ನೆಗೆ. ಎನ್‌ಡಿಎ ಮೈತ್ರಿ ಅಡಿಯಲ್ಲಿ ಯಾರಿಗಾದರೂ ಟಿಕೆಟ್ ಸಿಗಬಹುದು, ಅವರಿಗೆ ಟಿಕೆಟ್ ನೀಡಬೇಕೆಂಬುದಿಲ್ಲವಲ್ಲ ಎಂದರು.
ಬಿಜೆಪಿ ಮುಖಂಡರ ಒತ್ತಡ, ಹಾಡೋನಹಳ್ಳಿ ಅಪ್ಪಯ್ಯಣ್ಣ ಅವರ ಮಗ ಕೂಡ ಸಲಹೆ ನೀಡಿದ್ದು ನನಗೇ ಟಿಕೆಟ್ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಹುಸ್ಕೂರು ಆನಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.