ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹಾಗೂ ಸಂಸದ ಡಾ.ಕೆ ಸುಧಾಕರ್ (Dr K Sudhakar) ನಡುವೆ ವಿರಸಕ್ಕೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ರೆಡ್ಡಿ ನೇಮಕವನ್ನು ತಡೆ ಹಿಡಿಯುವಂತೆ ಹೈಕಮಾಂಡ್ ಸೂಚಿಸಿದೆ.
ಈ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.
ಇದರನ್ವಯ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕೂ ಸಂದೀಪ್ ರೆಡ್ಡಿ ಅವರಿಗೆ ತಡೆ ನೀಡಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಮೇರೆಗೆ, ಅವರು ಮುಂದಿನ ಮಾಹಿತಿ ನೀಡುವವರೆಗೆ ಜಿಲ್ಲಾ ಅಧ್ಯಕ್ಷರ ಆಯ್ಕೆಯನ್ನು ತಡೆ ಹಿಡಿಯಿರಿ ಎಂದು ಪತ್ರದ ಮೂಲಕ ವಿಜಯೇಂದ್ರಗೆ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಡಾ.ಕೆ.ಸುಧಾಕರ್, ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕರ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂದೀಪ್ ರೆಡ್ಡಿ ನೇಮಕ ಬಿಜೆಪಿಯಲ್ಲಿ ಬಣ ರಾಜಕಾರಣಕ್ಕೆ ಕಾರಣವಾಗಿತ್ತು. ಡಾ.ಕೆ.ಸುಧಾಕರ್, ಈ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೆ ದೂರು ಸಹ ನೀಡಿದ್ದು, ವಿಜಯೇಂದ್ರ ಮುಖಭಂಗಕ್ಕೆ ಕಾರಣವಾಗಿದೆ.