Site icon Harithalekhani

ರಾಜಕೀಯದಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು ಹಾಳಾಗುವುದು ಬೇಡ: ಹೆಚ್.ಡಿ.ಕುಮಾರಸ್ವಾಮಿ ಮನವಿ

Human relations in villages should not be spoiled by politics: HDK appeals

Human relations in villages should not be spoiled by politics: HDK appeals

ಮಂಡ್ಯ (ನಾಗಮಂಗಲ): ರಾಜಕೀಯ ಕಾರಣದಿಂದ ಹಳ್ಳಿಗಳಲ್ಲಿ ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಾಳಾಗುವುದು ಬೇಡ ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದರು.

ನಾಗಮಂಗಲ ತಾಲೂಕಿನ ಚಿಕ್ಕವೀರಕೊಪ್ಪಲು ಗ್ರಾಮದಲ್ಲಿ ಊರಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಮಾನವ ಸಂಬಂಧಗಳು, ರಕ್ತ ಸಂಬಂಧಗಳು ಹಳ್ಳಿಗಳಲ್ಲಿ ಗಾಢವಾಗಿದ್ದವು. ನೆರೆಹೊರೆಯವರು ಚೆನ್ನಾ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಈ ಕಾರಣದಿಂದ ಗ್ರಾಮಗಳು ನೆಮ್ಮದಿಯಾಗಿದ್ದವು. ಈಗ ಆ ನೆಮ್ಮದಿ ಸಂತೋಷ ದೂರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೆ ಹಳ್ಳಿಗಳು ಎಂದರೆ ನೆಮ್ಮದಿಯ ತಾಣಗಳು ಆಗಿದ್ದವು. ಯಾರದೇ ಮನೆಯಲ್ಲಿ ಶುಭ ಕಾರ್ಯಗಳು ನಡೆದರೆ ಇಡೀ ಊರಿಗೆ ಊರೇ ಸೇರುತ್ತಿತ್ತು. ಪಂಕ್ತಿ ಭೋಜನ ಇರುತ್ತಿತ್ತು. ಅಜ್ಜ, ಅಜ್ಜಿ, ತಂದೆ ತಾಯಿಯ ಜತೆ ಅಂತಹ ಶುಭ ಕಾರ್ಯಗಳಲ್ಲಿ ಪಾಲ್ಗೊಂಡ ನೆನಪು ನನಗಿನ್ನೂ ಹಚ್ಚ ಹಸಿರಾಗಿದೆ. ಹಾಗೆಯೇ ಯಾರಿಗೆ ಕಷ್ಟ ಬಂದರೂ ಇಡೀ ಊರೇ ಮಿಡಿಯುತ್ತಿತ್ತು. ಅಂತಹ ವಾತಾವರಣದಿಂದ ನಾವು ವಂಚಿತರಾಗಿದ್ದೇವೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಹಳ್ಳಿ ಹಬ್ಬಗಳು, ಜಾತ್ರೆಗಳು ಜನರನ್ನು ಒಂದು ಮಾಡುತ್ತವೆ. ಸಾಮರಸ್ಯ ಮೂಡಿಸುತ್ತಿವೆ. ನಿಮ್ಮಲ್ಲಿ ರಾಜಕೀಯ ಇರಲಿ, ಅದು ಚುಣಾವಣೆಗೆ ಸೀಮಿತವಾಗಿರಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮಾಜಿ ಶಾಸಕರ ಸುರೇಶ್ ಗೌಡ, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಗ್ರಾಮಸ್ಥರು ಸಚಿವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಇದಕ್ಕೂ ಮೊದಲು ಸಚಿವರು ಬೆಟ್ಟದಮಲ್ಲೇನಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಹುಚ್ಚಮ್ಮದೇವಿ ದೇವಸ್ಥಾನಕ್ಕೆ ತೆರಳಿ ಅಮ್ಮನವರ ದರ್ಶನ ಪಡೆದರು.

Exit mobile version