ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ತಮ್ಮ ಪತ್ನಿ ಉಷಾ (Usha) ಅವರೊಂದಿಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಇಂದು ಪವಿತ್ರಾ ಸ್ನಾನ ಮಾಡಿದರು.
ನಂತರ ಪ್ರತಿಕ್ರಿಯೆ ನೀಡಿದ ಅವರು, 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ.
ಕುಂಭ ಮೇಳದ ವ್ಯವಸ್ಥೆ ಮಾಡಿರುವುದು ಇದು ಸಣ್ಣ ಕೆಲಸವಲ್ಲ. ಆಯೋಜನೆ, ಸಂಘಟನೆ ಹೇಗೆ ನಡೆಯುತ್ತಿದೆ ಎಂದು ನಾನು ನೋಡಿದ್ದೇನೆ. ಮಹಾಕುಂಭ ಮೇಳ ಎನ್ನುವುದು ಇದು ಒಬ್ಬರ ಜೀವನದಲ್ಲಿ ಬರುವ ಒಂದು ಐತಿಹಾಸಿಕ ಕ್ಷಣ.
ಕುಂಭ ಮೇಳದ ವಿಚಾರದಲ್ಲಿ ನನ್ನನ್ನು ಟೀಕಿಸುವ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗಲಿ, ಕುಂಬಮೇಳದ ಬಗ್ಗೆ ನಮ್ಮ ಪಕ್ಷದ ನಾಯಕರಾಗಲಿ ಯಾರೇ ಏನು ಹೇಳಿದರೂ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ.

ಇದು ನನ್ನ ನಂಬಿಕೆ. ಕುಂಭ ಮೇಳದ ವಿಚಾರವಾಗಿ ನಮ್ಮ ಪಕ್ಷದ ನಾಯಕರು ವಿಶಾಲ ಅರ್ಥದಲ್ಲಿ ಹೇಳಿದ್ದಾಗಿ ತಿಳಿಸಿದರು.
ಯಾವುದೇ ಧರ್ಮ, ಸಂಸ್ಕೃತಿ, ನಂಬಿಕೆಗಳು. ಆಚರಣೆ ಅವರವರ ವ್ಯಕ್ತಿಗತವಾಗಿರುತ್ತದೆ. ಅದಕ್ಕೇ ನಾವು ಗೌರವಿಸಬೇಕು ಎಂದ ಡಿಕೆ ಶಿವಕುಮಾರ್ ಅವರು, ಕುಂಭಮೇಳವು ರಾಜಕೀಯ ಕಾರ್ಯಕ್ರಮವಾಗಬಾರದು.
ಬಿಜೆಪಿ ಕೇವಲ ಪ್ರಚಾರ, ತನ್ನ ರಾಜಕೀಯ ಲಾಭಕ್ಕಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
