Site icon Harithalekhani

ಜನರಿಗೆ ಸಾಲ ಕೊಡಿ: ಆರ್‌.ಅಶೋಕ ಆಗ್ರಹ

Lend to people: R. Ashoka Agraha

Lend to people: R. Ashoka Agraha

ಹಾಸನ: ಕಾಂಗ್ರೆಸ್‌ ಸರ್ಕಾರದಿಂದಾಗಿ ಕರ್ನಾಟಕ ಸೂತಕದ ಮನೆಯಾಗಿದೆ. ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದರಿಂದ ಜನರು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕ ಸೂತಕದ ಮನೆಯಾಗಿದೆ. ಮೈಕ್ರೋ ಫೈನಾನ್ಸ್‌ಗಳಿಂದ ಆತ್ಮಹತ್ಯೆ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ.

ಗುತ್ತಿಗೆದಾರರು ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶೇ.60 ರ ಕಮಿಶನ್‌ ದಂಧೆಯಿಂದಾಗಿ ಅಧಿಕಾರಿಗಳು ಸಾಯುತ್ತಿದ್ದಾರೆ. ಇದರ ಜೊತೆಗೆ ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ, ಬ್ಯಾಂಕ್‌ ದರೋಡೆ ನಡೆಯುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 24-25 ಜನರು ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಸರ್ಕಾರ ಸುಗ್ರೀವಾಜ್ಞೆ ಎನ್ನುತ್ತಿದೆಯೇ ಹೊರತು, ಒಂದೇ ಒಂದು ಮೈಕ್ರೋ ಫೈನಾನ್ಸ್‌ನ ವಿರುದ್ಧ ಕ್ರಮ ಕೈಗೊಂಡಿಲ್ಲ.

ಸಿಎಂ ಸಿದ್ದರಾಮಯ್ಯ ಎಷ್ಟು ಗುಡುಗಿದರೂ ಮೈಕ್ರೋ ಫೈನಾನ್ಸ್‌ಗಳು ಕ್ಯಾರೇ ಎಂದಿಲ್ಲ. ಕುಂಭಮೇಳದಲ್ಲಿ ಜನರು ಸತ್ತಿದ್ದಕ್ಕೆ ಕಾಂಗ್ರೆಸ್‌ ನಾಯಕರು ಬಾಯಿ ಬಡಿದುಕೊಂಡರು. ಆದರೆ ಸಾಲ ವಸೂಲಿಗಾರರ ಕಿರುಕುಳದಿಂದ ಸತ್ತವರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿಲ್ಲ ಎಂದರು.

ನಿಗಮಗಳಿಗೆ ಹಣವಿಲ್ಲ

ಅಭಿವೃದ್ಧಿ ನಿಗಮಗಳಿಗೆ ಹೆಚ್ಚು ಅನುದಾನ ನೀಡಿ ಸಾಲ ಕೊಟ್ಟಿದ್ದರೆ, ಜನರು ಮೈಕ್ರೋ ಫೈನಾನ್ಸ್‌ ಮೊರೆ ಹೋಗುತ್ತಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಗೆ 2022-23 ರಲ್ಲಿ ಬಿಜೆಪಿ ಸರ್ಕಾರ 60 ಕೋಟಿ ರೂ. ಅನುದಾನ ನೀಡಿತ್ತು.

2024-25 ರಲ್ಲಿ ಕಾಂಗ್ರೆಸ್‌ 40 ಕೋಟಿ ರೂ. ನೀಡಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆಗೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 45 ಕೋಟಿ ರೂ. ನೀಡಿದೆ. ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಬಿಜೆಪಿ 100 ಕೋಟಿ ರೂ. ನೀಡಿದರೆ, ಕಾಂಗ್ರೆಸ್‌ 50 ಕೋಟಿ ರೂ. ನೀಡಿದೆ.

ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಗ್ಯಾರಂಟಿ ಬಗ್ಗೆ ಹೇಳಿದ್ದಕ್ಕೆ ಬಾಯಿ ಬಡಿದುಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ 1.5 ಲಕ್ಷ ಕೋಟಿ ರೂ. ಗೂ ಅಧಿಕ ಸಾಲವನ್ನು ಕಾಂಗ್ರೆಸ್‌ ಸರ್ಕಾರ ಮಾಡಲಿದೆ ಎಂದರು.

ತುರ್ತಾಗಿ ನಿಗಮಗಳಿಗೆ 5,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಜನರಿಗೆ ಸಾಲ ಕೊಟ್ಟರೆ ಅನುಕೂಲವಾಗುತ್ತದೆ. ಜೊತೆಗೆ ಇರುವ ಕಾನೂನನ್ನೇ ಬಳಸಿ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು.

ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್‌ ಸಮ್ಮಾನ್‌ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಸಬೇಕು. ಅಭಿವೃದ್ಧಿ ಕಾರ್ಯಕ್ಕೆ 80,000 ಕೋಟಿ ರೂ. ಸಿಗುತ್ತದೆ. ಅದರಲ್ಲಿ 55,000 ಕೋಟಿ ರೂ. ಅನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ.

ಇನ್ನುಳಿದ ಹಣದಲ್ಲಿ ಅಭಿವೃದ್ಧಿ ಹೇಗಾಗುತ್ತದೆ? ಶಾಸಕ ಬಿ.ಆರ್‌.ಪಾಟೀಲ್‌ ಇದನ್ನೇ ಪ್ರಶ್ನೆ ಮಾಡಿ ರಾಜೀನಾಮೆ ನೀಡಿದ್ದಾರೆ ಎಂದರು.

ಇಷ್ಟೆಲ್ಲ ಹೇಳಿದ ಆರ್ ಅಶೋಕ್ ಬಿಜೆಪಿ ಬಣ ಬಡಿದಾಟದ ಕುರಿತು ಸುದ್ದಿಗಾರರು ಪ್ರಶ್ನಿಸಿದರೆ, ಅವರಿಗೂ ಅದಕ್ಕೂ ಸಂಬಂಧ ಇಲ್ಲವೆಂಬಂತೆ ನುಣಿಚಿಕೊಂಡರು.

Exit mobile version