ದೊಡ್ಡಬಳ್ಳಾಪುರ (Doddaballapura): ನಿನ್ನೆ ಪಿಯು ಕಾಲೇಜು ಮುಂದೆ ನಡೆದ ವ್ಯಾಪಾರಿಗಳು ಹಾಗೂ ರೈತರ ನಡುವಿನ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.
ರೈತರ ವ್ಯಾಪಾರಕ್ಕೆ ಅಡ್ಡಿ ಮಾಡಬೇಡಿ ಎಂದು ಪೊಲೀಸರ ಸೂಚನೆ ಬೆನ್ನಲ್ಲೇ, ಲೈಸೆನ್ಸ್ ಪಡೆಯದೆ ನಗರದಲ್ಲಿ ವ್ಯಾಪಾರ ನಡೆಸುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ನೀಡಿದ್ದಾರೆ.
ಈ ಪತ್ರದ ಅನ್ವಯ ಕಳೆದ 30 ರಿಂದ 40 ವರ್ಷಗಳಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಳೆಚಳಿ ಧೂಳು ಬಿಸಿಲಿನಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ, ಹಣ್ಣು, ಹಂಪಲುಗಳ ವ್ಯಾಪಾರ ಮಾಡಿಕೊಂಡು ಇದನ್ನೇ ನಂಬಿ ಬದುಕು ಕಟ್ಟಿಕೊಂಡು, ಈ ವ್ಯಾಪಾರ ಬಿಟ್ಟರೆ ಬೇರೆ ಕಸಬು ತಿಳಿಯದೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ.
ಈ ಹಿಂದೆ ಸಾಕಷ್ಟು ಬಾರಿ ನಗರಸಭೆಗೆ ನಮ್ಮ ಸಮಸ್ಯೆಗಳನ್ನು ಬಗೆ ಹರಿಸಲು ಒತ್ತಾಯಿಸಿ ನೂರಾರು ಬೀದಿಬದಿ ವ್ಯಾಪಾರಸ್ಥರನ್ನು ನಗರಸಭೆ ಮುಂದೆ ಸೇರಿಸಿ ಪ್ರತಿಭಟನೆ ನಡೆಸಿ ಮನವಿಯನ್ನು ಸಹಸಲ್ಲಿಸಲಾಗಿದೆ. ಆದರೆ ಇಲ್ಲಿಯತನಕ ನಮ್ಮಬಬೇಡಿಕೆಗಳು ಈಡೇರಿಸಿಲ್ಲ ಅದನ್ನು ಗಮನಿಸಬೇಕು.
ನಾವು ವರ್ಷಾ ಪೂರ್ತಿ ತುಂಬಾ ಕಷ್ಟ ಬಿದ್ದು ವ್ಯಾಪಾರವಹಿವಾಟು ನಡೆಸುತ್ತಿರುತ್ತೇವೆ. ಆದರೆ ಕೆಲವರು ಹೊರಗಿನಿಂದ ಬಂದು ಸೀಸನ್ನಲ್ಲಿ ವ್ಯಾಪಾರ ಮಾಡಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ.
ನಗರಸಭೆಯಿಂದ ಗುರುತಿನ ಚೀಟಿಯನ್ನು ಪಡೆಯದೆ ನಿಯಮಾನುಸರ ವ್ಯಾಪಾರ ಮಾಡುತ್ತಿರುವವರಿಗೆ ತುಂಬಾ ಕಷ್ಟನಷ್ಟ ಆಗುತ್ತಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳು ಸೂಕ್ತಕ್ರಮ ಜರುಗಿಸುವುದರೊಂದಿಗೆ ನಿಯಂತ್ರಣ ಮಾಡಬೇಕಾಗಿದೆ.
ವಿಷಾದ ವ್ಯಕ್ತಪಡಿಸಿದ ಸಿಐಟಿಯು
ನಿನ್ನೆ ವ್ಯಾಪಾರಿಗಳ ನಡುವೆ ನಡೆದ ಮಾತಿನ ಚಕಮುಖಿಯನ್ನು ಬೀದಿಬದಿ ವ್ಯಾಪಾರಿಗಳ ಸಂಘ(ಸಿಐಟಿಯು) ಗಮನಿಸಿದೆ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತಿದೆ.
ನಾವು ರೈತರು ಬೆಳೆದ ಪದಾರ್ಥಗಳನ್ನು ತಂದು ವ್ಯಾಪಾರ ನಡೆಸುವವರು ನಮಗೂ ಮತ್ತು ರೈತರ ನಡುವೆ ಸೌಹಾರ್ದ ಸಂಬಂಧವಿದೆ, ರೈತರು ಬೆಳೆದ ಪದಾರ್ಥಗಳನ್ನು ವ್ಯಾಪಾರ ಮಾಡಲು ನಮ್ಮ ವಿರೋಧವಿಲ್ಲ ಆದರೆ ನಿಯಮಾನುಸಾರ ಮಾಡಬೇಕಷ್ಟೆ.
ಸರಿಯಾಗಿ ಬಿಸಿನೆಸ್ ಇಲ್ಲದೆ ಜೀವನ ನಡೆಸಲು ಕಷ್ಟವಾದಾಗ ವ್ಯಾಪಾರಸ್ಥರ ನಡುವೆ ಜಗಳ ನಡೆಯುತ್ತಿರುತ್ತದೆ. ಆದರೆ ದೊಡ್ಡದೊಡ್ಡ ಮಾಲ್ಗಳು ಬಂದು ವ್ಯಾಪಾರಸ್ಥರನ್ನು ನುಂಗಿ ಕುಳಿತಿವೆ. ಈ ನೀತಿಯ ವಿರುದ್ಧ ನಮ್ಮ ಹೋರಾಟ ನಡೆಸಬೇಕಾಗಿದೆ.
ಆದ್ದರಿಂದ ತಾವುಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಈ ಮೂಲಕ ಮನವಿ ಸಲ್ಲಿಸುತ್ತೇವೆ ಎಂದಿದೆ.
ಬೇಡಿಕೆಗಳು
- ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ನೀಡಬೇಕು.
- ನಗರದಲ್ಲಿ ಅಗತ್ಯವಿರುವ ಕಡೆವ್ಯಾಪಾರಿ ವಲಯ ಸ್ಥಾಪಿಸಬೇಕು. (ಸ್ಟ್ರೀಟ್ವೆಂಡರ್ಸ್ಜೋನ್)
- ಪರ್ಯಾಯ ವ್ಯವಸ್ಥೆ ಮಾಡದೆ ಬೀದಿಬದಿ’ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು.
- ಅನಗತ್ಯ ಪೊಲೀಸರ ಕಿರುಕುಳ ನಿಲ್ಲಬೇಕು.
- ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು.
- ಉಚಿತ ಆರೋಗ್ಯ ಮತ್ತು ಶಿಕ್ಷಣ ನೀಡಬೇಕು. ಎಲ್ಲರಿಗೂ ಬಿ.ಪಿ.ಎಲ್ ಕಾರ್ಡ್ ನೀಡಬೇಕು.
- ಕಟ್ಟಡ ಕಾರ್ಮಿಕರಿಗೆ ಸಿಗುತ್ತಿರುವ ರೀತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗಬೇಕು.
- ಶ್ರೀಸಿದ್ಧಲಿಂಗಯ್ಯ ವೃತ್ತದಲ್ಲಿ ಮತ್ತು ನಗರದ ಪ್ರಮುಖ ವೃತ್ತಗಳಲ್ಲಿ ರಸ್ತೆಗಳಲ್ಲಿ ಸಿಸಿಟಿವಿಗಳನ್ನು ಆಳವಡಿಸಲು ಮನವಿ.
- ಬೀದಿಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಣೆ ಮಾಡಲು ಕಾನೂನು ಬದ್ಧವಾಗಿ ರಚಿಸಲ್ಪಟ್ಟಿರುವ ನಮ್ಮ ಸಂಘದೊಂದಿಗೆ ವ್ಯವಹರಿಸಲು ನಗರಸಭಾ ಆಡಳಿತ ಮತ್ತು ತಾಲ್ಲೂಕು ಆಡಳಿತ ಸೂಕ್ತ ಕ್ರಮವನ್ನು ಜರುಗಿಸಬೇಕು.