ಚಿಕ್ಕಬಳ್ಳಾಪುರ: ತಮ್ಮ ಭಾವ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂಬ ಆಕ್ರೋಶದ ಹಿನ್ನೆಲೆಯಲ್ಲಿ ಬಾವಮೈದನೆ ತನ್ನ ಭಾವನನ್ನ ಕೊಲೆ (Murder) ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಕಣಿವೆ ಪ್ರದೇಶದಿಂದ ಮೋಟ್ಟೂರಿಗೆ ಹೋಗುವ ಕ್ರಾಸ್ ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗೌಚೇನಹಳ್ಳಿ ನಿವಾಸಿ 35 ವರ್ಷದ ಸುಭಾಷ್ ಎಂದು ಗುರ್ತಿಸಲಾಗಿದೆ.
ಈತ ಒಂಟಿಯಾಗಿ ರಸ್ತೆಯಲ್ಲಿ ಹೋಗುತ್ತಿರುವಾಗ ಹೊಂಚು ಹಾಕಿದ್ದ ಈತನ ಬಾಮೈದ 5 ಜನ ಸ್ನೇಹಿತರೊಂದಿಗೆ ಅಟ್ಟಡಿಸಿಕೊಂಡು ಹೋಗಿ ಮಚ್ಚು ಹಾಗೂ ಕಲ್ಲುಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಮೋರಿಯಲ್ಲಿ ಮೃತ ದೇಹವನ್ನು ಬಿಸಾಡಿದ್ದಾರೆ.
ಈ ಸಂಬಂದ ಕೊಲೆ ಆರೋಪಿ ಮನೋಜ್ ಹಾಗೂ ಐದು ಜನರನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ‘ಗೌಚೇನಹಳ್ಳಿಯ ಸುಭಾಷ್ (35 ವರ್ಷ) ಒಂದೂವರೆ ವರ್ಷದ ಹಿಂದೆ ಅಂತರ್ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಅವರಿಗೆ ಮೂರು ತಿಂಗಳ ಮಗು ಸಹ ಇದೆ.
ಸುಭಾಷ್ ಮತ್ತೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಎರಡೂ ಕುಟುಂಬದ ನಡುವೆ ತಿಂಗಳ ಹಿಂದೆ ಜಗಳ ಸಹ ನಡೆದಿತ್ತು. ನಂತರ ಸಂಧಾನ ಮಾಡಿಕೊಂಡಿದ್ದರು ಎಂದು ವಿವರಿಸಿದರು.
ಈ ಅಕ್ರಮ ಸಂಬಂಧದ ವಿಚಾರವಾಗಿ ಸುಭಾಷ್ ಅವರ ಬಾಮೈದ ಮನೋಜ್ ಮತ್ತು ಅವರ ಸ್ನೇಹಿತರು ಸುಭಾಷ್ ಜೊತೆ ಜಗಳ ಮಾಡಿದ್ದರು.
ಸೋಮವಾರ ರಾತ್ರಿ ಮನೋಜ್, ಸುಭಾಷ್‌ಗೆ ಕರೆ ಮಾಡಿ ಮೊಟ್ಲೂರು ಕ್ರಾಸ್‌ಗೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಬಂದ ಸುಭಾಷ್‌ನನ್ನು ಆತ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದಾರೆ.
ತಲೆಯ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಸುಭಾಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಿದರು.
ಪ್ರಕರಣ ಸಂಬಂಧ ಪ್ರವೀಣ್, ಮನೋಜ್, ವಿಘ್ನೇಶ್, ಗಿರೀಶ್, ಅನಿಲ್, ಪ್ರಸಾದ್, ಮೋಹನ್, ಕಾರ್ತಿಕ್ ನಂದ ಮತ್ತು ನಂದ ಅವರನ್ನು ಬಂಧಿಸಿದ್ದೇವೆ ಎಂದರು.