ದೊಡ್ಡಬಳ್ಳಾಪುರ (Doddaballapura): ನಗರದ ಇಸ್ಲಾಂಪುರ ನಿವಾಸಿ ಉಪೇಂದ್ರ ಎಂಬಾತನ ರುಂಡ ಕತ್ತರಿಸಿದ್ದ ಆರೋಪ ಸಾಬೀತಾಗಿದೆ.
ಈ ಹಿನ್ನೆಯಲ್ಲಿ ತಾಲ್ಲೂಕಿನ ಪವನ್ (21) ಎಂಬಾತನಿಗೆ ಕಠಿಣ ಅಜೀವ ಕಾರಾಗೃಹ ಹಾಗೂ ರೂ.2 ಲಕ್ಷ ದಂಡ ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಧೀಶರಾದ ರಮೇಶ್ ದುರುಗಪ್ಪ ಏಕಬೋಟೆ ಅವರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಕೀಲರಾದ ನಟರಾಜ್ ವಾದ ಮಂಡಿಸಿದ್ದರು.
ಘಟನೆ ವಿವರ
ನಗರದ ಡಿ.ಕ್ರಾಸ್ ಸಮೀಪದ ಚರಂಡಿಯಲ್ಲಿ 2018ರಲ್ಲಿ ಉಪೇಂದ್ರ ಎಂಬಾತನ ರುಂಡ ಪತ್ತೆಯಾಗಿತ್ತು.
ಈ ಪ್ರಕರಣ ಬೆಳಕಿಗೆ ಬಂದ 24 ಗಂಟೆಗಳಲ್ಲಿಯೇ ಆರೋಪಿ ಪವನ್ ಎಂಬಾತನನ್ನು ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು, ನಗರ ಪೊಲೀಸ್ ಠಾಣೆಯಲ್ಲಿ ಅಂದು ಸಬ್ ಇನ್ಸ್ಪೆಕ್ಟರ್ ಆಗಿದ್ದ ಬಿ.ಕೆ.ಪಾಟೀಲ್ ಅವರು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು.
ನಗರದಲ್ಲಿ ಎರಡು ರೌಡಿ ಗುಂಪುಗಳು ತಮ್ಮ ಪ್ರಾಭಲ್ಯವನ್ನು ಸಾಧಿಸಲು ಈ ಕೃತ್ಯ ನಡೆಸಲಾಗಿತ್ತು ಎಂದು ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿದ್ದರು.
ಆರೋಪಿಗಳನ್ನು ಶೀಘ್ರವಾಗಿದ್ದ ಬಂಧಿಸಿ ನಗರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಕ್ಕಾಗಿ ಆ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್.ಗುಳೇದ್ ಅವರು ಪೊಲೀಸರಿಗೆ ಇಲಾಖೆ ವತಿಯಿಂದ ₹5,000ಗಳ ಬಹುಮಾನವನ್ನು ನೀಡಿದ್ದರು.