ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಸಿದ್ದೇನಾಯಕನಹಳ್ಳಿ ತಿರುವಿನ ಬಳಿ ಇಂದು ಮಧ್ಯಾಹ್ನ ಸಾರಿಗೆ ಬಸ್ ಅಪಘಾತಕ್ಕೀಡಾಗಿದ್ದ (Accident) ಘಟನೆಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವನಪ್ಪಿದ್ದಾರೆ.
ಬೆಂಗಳೂರಿನಿಂದ ಹಿಂದೂಪುರಕ್ಕೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ( KSRTC ) ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ನಡುವಿನ ವಿಭಜಕಕ್ಕೆ ಡಿಕ್ಕಿಹೊಡೆದಿದೆ.
ದ್ವಿಚಕ್ರ ವಾಹನ ಅಡ್ಡ ಬಂದ ವೇಳೆ ಬಸ್ ಚಾಲಕ ತಪ್ಪಿಸಲು ಮುಂದಾದ ಸಂದರ್ಭದಲ್ಲಿ, ನಿಯಂತ್ರಣ ತಪ್ಪಿದ ಬಸ್ ರಸ್ತೆ ನಡುವಿನ ಸಿಮೆಂಟ್ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸಾವರ ಸಿದ್ದೇನಾಯಕನಹಳ್ಳಿ ನಿವಾಸಿ 60 ವರ್ಷದ ವೆಂಕಟರಾಜು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಉಳಿದಂತೆ ಸಣ್ಣಪುಟ್ಟ ಗಾಯಗಳಾಗಿದ್ಸ ಬಸ್ಸಿನಲ್ಲಿದ್ದ ಪ್ರಯಾಣಿಕರು ಚಿಕಿತ್ಸೆ ಪಡೆದು ಸ್ವಗ್ರಾಮಗಳಿಗೆ ತೆರಳಿದ್ದಾರೆ.
ನಿರ್ಲಕ್ಷ್ಯದ ಆರೋಪ
ಬೆಂಗಳೂರು ಮತ್ತು ಹಿಂದೂಪುರ ನಡುವಿನ ರಾಜ್ಯ ಹೆದ್ದಾರಿ ಟೋಲ್ ರಸ್ತೆಯಾಗಿದ್ದು, ಈ ರಸ್ತೆಯಲ್ಲಿನ ಸಿದ್ದೇನಾಯಕನಹಳ್ಳಿ ವೃತ್ತದ ಬಳಿ ಪದೇ ಪದೇ ಅಪಘಾತ ಸಂಭವಿಸುತ್ತಿವೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯ ಕಾರಣ ವಾಹನಗಳು ನಿಯಂತ್ರಣಕ್ಕೆ ಸಿಗದೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ, ಈ ಕುರಿತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದರು, ಮಾಧ್ಯಮಗಳು ವರದಿ ಮಾಡಿದರು.. ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿದೆ.
ಈ ವ್ಯಾಪ್ತಿಯಲ್ಲಿ ಉಂಟಾಗುವ ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.