ದೊಡ್ಡಬಳ್ಳಾಪುರ (Doddaballapura): ತಾಲೂಕು ಪಂಚಾಯಿತಿ ಇಒ ಮುನಿರಾಜು ಅವರ ನೇತೃತ್ವದಲ್ಲಿ ತಾಲೂಕಿನ ಮನರೇಗಾ (Mnrega) ಯೋಜನೆ ಕಾಮಗಾರಿಗಳು ತೀವ್ರಗತಿಯಲ್ಲಿ ನಡೆಯುತ್ತಿದೆ.
ಅದರಲ್ಲಿ ಪ್ರಮುಖವಾಗಿ ಬೂದು ನೀರು ನಿರ್ವಹಣಾ ಕಾಮಗಾರಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಏನಿದು ಬೂದು ನೀರು..?
ಮನೆಯಿಂದ ಬಳಕೆಯಾಗಿ ಚರಂಡಿಗೆ ಸೇರುವ ತ್ಯಾಜ್ಯ ನೀರಿಗೆ ಬೂದು ನೀರು ಎಂದು ಕರೆಯಲಾಗುತ್ತದೆ. ಈ ನೀರನ್ನು ಬೇಕಾಬಿಟ್ಟಿಯಾಗಿ ಕೆರೆಗಳಿಗೆ ಹರಿಸದೆ, ಭೂಮಿಯಲ್ಲಿಯೇ ಸಂಸ್ಕರಿಸಿ ಇಂಗಿಸಲು ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪಿಡಿಒ ತಿರುಪತಿ ಅವರು ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿಯಲ್ಲಿ ಮನರೇಗಾ ಯೋಜನೆ ಬಳಸಿ ತಾಲೂಕಿನಲ್ಲಿ 259 ಬೂದು ನೀರು ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ.
ಪ್ರಸ್ತುತ ತಾಲೂಕಿನ 84 ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿ ಪೂರ್ಣಗೊಂಡಿದ್ದು, 95 ಗ್ರಾಮಗಳಲ್ಲಿ ಅಂತಿಮ ಹಂತದಲ್ಲಿದೆ.
ಚರಂಡಿ ಮೂಲಕ ಹರಿಯುವ ಮನೆಗಳ ತ್ಯಾಜ್ಯ ನೀರನ್ನು ಈ ರೀತಿ ನಿರ್ಮಿಸಿರುವ ಬೂದು ನೀರು ನಿರ್ವಹಣೆ ಹಳ್ಳದಲ್ಲಿ ಸಂಗ್ರಹಿಸಿ, ಇಲ್ಲಿ ಕಸಕಡ್ಡಿಗಳನ್ನು ಸ್ವಚ್ಛಗೊಳಿಸಿ ಭೂಮಿಯಲ್ಲಿ ಇಂಗುವಂತೆ ಮಾಡಲಾಗುತ್ತದೆ.
ಈ ಯೋಜನೆ ಪರಿಸರ ಸ್ನೇಹಿಯಾಗಿರುವುದರಿಂದ ಗ್ರಾಮಗಳಲ್ಲಿ ಚರಂಡಿ ನೀರು ನಿಲ್ಲುವುದನ್ನು ತಡೆಯುತ್ತದೆ ಎಂದಿದ್ದಾರೆ.