![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
Daily story: ಗೋಪಾಲಣ್ಣ ವೃತ್ತಿಯಲ್ಲಿ ಮೇಷ್ಟ್ರು. ಅವರು ಹೇಳುತ್ತಿದ್ದರು, ‘ನಮ್ಮದೂ ಒಂದು ಕೆಲಸ ಏನ್ರೀ? ಹಾಡಿದ್ದೇ ಹಾಡು ಕಿಸಿಬಾಯಿದಾಸ ಎಂದ ಹಾಗೆ ಹೇಳಿದ್ದನ್ನೇ ಹೇಳುವುದು. ನನಗೆ ತಲೆ ಕೆಟ್ಟುಹೋಗಿದೆ’.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ರಾಜಪ್ಪ ವೃತ್ತಿಯಲ್ಲಿ ವೈದ್ಯರು. ಅವರಿಗೂ ತಮ್ಮ ಕೆಲಸದ ಬಗ್ಗೆ ಬೇಜಾರು. ‘ನಾವೆಲ್ಲ ಜೀತದಾಳುಗಳು ಸರ್. ನಮ್ಮದು ಎನ್ನುವ ಸಮಯವೇನಾದರೂ ಇದೆಯೇ? ಭಾನುವಾರ, ರಜಾದಿನ ಯಾವುದೂ ನಮಗಿಲ್ಲ. ದಿನ ಬೆಳಗಾದರೆ ರೋಗಿಗಳ, ಅಳುಮುಖದವರ ಜೊತೆಗೆ ಏಗಿ, ಮಾತು ನನಗೆ ನಗೋದೇ ಮರೆತು ಹೋಗಿದೆ’.
ಮಾಜಿ ಮಂತ್ರಿ ಹಾಗೂ ಸದಾ ಚಟುವಟಿಕೆಯಲ್ಲಿ ಇರುವ ರಾಜಕಾರಣಿ ಗುಂಡಣ್ಣ ಹೇಳುತ್ತಾರೆ, ‘ನಮ್ಮ ವೃತ್ತಿಯಲ್ಲಿ ಯಾವುದೂ ಗ್ಯಾರಂಟಿ ಇಲ್ಲ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ನಮ್ಮದೇನಿದ್ದರೂ ಸೀಜನಲ್ ಕೆಲಸ. ಐದು ವರ್ಷ ಅಧಿಕಾರದ ಪಲ್ಲಕ್ಕಿ ದೊರೆತರೆ ಮುಂದೆ ಅದೆಷ್ಟು ವರ್ಷ ಅಧಿಕಾರಕ್ಕೆ ಕಾಯಬೇಕೋ? ಅದು ಮುಂದೆ ದೊರೆಯದೆಯೇ ಹೋಗಬಹುದು. ಆದರೆ ನಮ್ಮ ಹಿಂಬಾಲಕರು ಒಂದೇ ಸಮನೆ ಪ್ರಾಣ ತೆಗೆಯುತ್ತಾರೆ.
ನನಗೆ ಇದು ಸಾಕಾಗಿ ಹೋಗಿದೆ. ಎಲ್ಲವನ್ನೂ ಬಿಟ್ಟು ಸುಮ್ಮನೆ ಮನೆಯಲ್ಲಿ ಕೂಡ್ರುವುದು ವಾಸಿ’. ಅದರೆ, ಮನೆಯಲ್ಲಿಯೇ ಕುಳಿತು ಮಕ್ಕಳನ್ನು ಬೆಳೆಸುವ ಸೌಭಾಗ್ಯಮ್ಮನವರ ಅಭಿಪ್ರಾಯವೇ ಬೇರೆ.
‘ಛೇ, ಇದೊಂದು ಜೈಲು. ಹೊರಗಿನ ಪ್ರಪಂಚದಲ್ಲಿ ಏನಾಗುತ್ತದೆ ಎಂಬುದೇ ತಿಳಿಯದೆ ಮನೆ ಆಯ್ತು, ಕೆಲಸ ಆಯ್ತು ಎಂದುಕೊಂಡು ಜೀವನವಿಡೀ ಬಾವಿಯಲ್ಲಿಯ ಕಪ್ಪೆಯಂತೆ ಕಳೆಯುವುದು ಯಾವ ಸುಖ?‘ ಎನ್ನುತ್ತಾರೆ ಅವರು.
ಹಾಗಾದರೆ ನಮ್ಮಲ್ಲಿ ಬಹಳಷ್ಟು ಜನ ತಮಗೆ ಇಷ್ಟವಿಲ್ಲದ ಕೆಲಸವನ್ನೇ ಮಾಡುತ್ತ ಜನ್ಮ ಸವೆಸುತ್ತಾರೆಯೇ? ಹೀಗೆ ಮನಸ್ಸಿಲ್ಲದೇ ಮಾಡಿದ ಕೆಲಸ ಪ್ರಯೋಜನವಾದೀತೇ? ಇದೇ ತರಹದ ಚಿಂತನೆ ಇಂಗ್ಲೆಂಡಿನ ಒಬ್ಬ ತರುಣನನ್ನು ಬಹುವಾಗಿ ಕಾಡಿತ್ತು.
ಆತ ಒಂದು ದಿನ ಮನೆಯಲ್ಲಿ ಏಕಾಂಗಿಯಾಗಿ ಕುಳಿತು ಚಿಂತಿಸಿದ. ಮನೆ ಶಾಂತವಾಗಿತ್ತು. ಗಡಿಯಾರದ ಮುಳ್ಳಿನ ಸದ್ದು ಕೇಳುವಷ್ಟು ಶಾಂತ. ಆತನ ತಲೆಯಲ್ಲಿ ಒಂದೇ ಕೊರೆತ. ನನ್ನ ಕೆಲಸ ನನಗೆ ತೃಪ್ತಿ, ಸಂತೋಷ ತರದಿದ್ದರೆ ಅದನ್ನು ಮಾಡುವುದು ಏಕೆ?.
ಅನಿಶ್ಚಿತತೆ ಹಾಗೂ ಹತಾಶೆಗಳ ನಡುವೆ
ಆತ ಕಣ್ಣು ಮುಚ್ಚಿ ಕುರ್ಚಿಗೆ ತಲೆಯಾನಿಸಿ ತನ್ನ ಆಗಿ ಹೋದ ಬದುಕನ್ನೇ ಗಮನಿಸಿದ. ಇದುವರೆಗೆ ಏನು ಮಾಡಿದೆ ನಾನು? ನನ್ನ ಇಡೀ ಬದುಕೇ ಬಡತನ, ಅನಾರೋಗ್ಯ, ಅನಿಶ್ಚಿತತೆ ಹಾಗೂ ಹತಾಶೆಗಳ ನಡುವೆ ಹರಿದು ಹಂಚಿ ಹೋಗಿದೆ.
ತಾನು ಮೊದಲು ಪಾದ್ರಿಯಾಗಬೇಕೆಂದು ತರಬೇತಿ ಪಡೆದು ಸೇರಿದವನು. ಆದರೆ, ಅಲ್ಲಿ ಕಲಿಸಿದ ಧರ್ಮದ ಅತಿರೇಕದ ಹಾಗೂ ಅತ್ಯಂತ ಸಂಕುಚಿತ ಅರ್ಥವನ್ನು ಕಂಡು ರೋಸಿ ಅದನ್ನು ಬಿಟ್ಟು ಬಂದೆ. ನಂತರ ಶಿಕ್ಷಕ ವೃತ್ತಿಯನ್ನು ಸೇರಿದೆ.
ಆ ವೃತ್ತಿಗೆ ಬೇಕಾದ ತಾಳ್ಮೆ, ಪ್ರೀತಿಗಳ ಕೊರತೆ ನನ್ನಲ್ಲಿ ಇದ್ದಿದ್ದರಿಂದ ಅದನ್ನು ತೊರೆದು ನಿಂತೆ. ಆದಾದ ನಂತರ ಹತ್ತಾರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರೂ ಯಾವುದರಲ್ಲಿಯೂ ಸಂತೋಷ ದಕ್ಕಲಿಲ್ಲ.
ಕೊನೆಗೆ ನಾನು ಬಯಸಿ ಕೈ ಹಿಡಿದದ್ದು ಈ ಬರಹ. ತನ್ನ ಬರವಣಿಗೆ ಸಂತೋಷ ಕೊಡುವುದರೊಂದಿಗೆ ಅದನ್ನು ಓದಿದ ಸಹಸ್ರಾರು ಜನರಿಗೆ ನೀಡುತ್ತಿದ್ದ ಸಂತೋಷ, ತನ್ನಲ್ಲಿ ತೃಪ್ತಿಯನ್ನು ಹೆಚ್ಚಿಸಿತ್ತು.
ಆ ತರುಣನ ಹೆಸರು ಥಾಮಸ್ ಕಾರ್ಲೈಲ್. ಇಂಗ್ಲೆಂಡಿನಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಮಿಂಚಿಹೋದ ಅಸಾಮಾನ್ಯ ಪ್ರತಿಭೆ ಕಾರ್ಲೈಲ್. ಆತನ ಬರವಣಿಗೆ ಅದೆಷ್ಟು ಜನರನ್ನು ಲೇಖಕರಾಗಲು ಪ್ರಚೋದಿಸಿತ್ತೋ? ರಾಬರ್ಟ್ ಬ್ರೌನಿಂಗ್, ಡಿಕೆನ್ಸ್, ಟೆನಿಸನ್, ಥ್ಯಾಕರೆ ಇವರೆಲ್ಲ ಕಾರ್ಲೈಲ್‌ನಿಂದ ಪ್ರಭಾವಿತರಾದವರು.
ರಸ್ಕಿನ್ ಮತ್ತು ಡಾರ್ವಿನ್ ಅವರಂತೂ ಈತನ ಶಿಷ್ಯರೇ ಆಗಿದ್ದರು. ಎಮರ್ಸನ್ ಮತ್ತು ಸರ್ ವಿಲಿಯಂ ಆಸ್ಲರ್ ಕೂಡ ಕಾರ್ಲೈಲ್ ತಮ್ಮ ಸಾಹಿತ್ಯ ನಿರ್ಮಾಣದ ಶಿಲ್ಪಿ ಎಂದು ಭಾವಿಸುತ್ತಿದ್ದರು.
ಕಾರ್ಲೈಲ್ ಬಹಳಷ್ಟು ಬರೆದಿದ್ದರೂ ಪ್ರತಿಯೊಬ್ಬರೂ ಮೆಚ್ಚುವುದು ಅವನ ಎಂಟು ಪದಗಳ ಒಂದು ಸಾಲನ್ನು. ಆ ಸಾಲು ತುಂಬ ಸುಲಭ ಹಾಗೂ ಅತ್ಯಂತ ಮಾರ್ಮಿಕ. ‘ಬ್ಲೆಸೆಡ್ ಈಸ್ ಹೀ ಹೂ ಹ್ಯಾಸ್ ಪೌಂಡ್ ಹಿಸ್ ವರ್ಕ’. ಅಂದರೆ, ‘ತನಗೊಪ್ಪಿದ ಕೆಲಸವನ್ನು ಪಡೆದವನೇ ಧನ್ಯ’. ಇದರ ಅರ್ಥ ಬಹು ಆಳಕ್ಕೆ ಹೋಗುವಂಥದ್ದು.
ನಮ್ಮ ಬದುಕಿನಲ್ಲಿ ನನಗೊಪ್ಪಿತವಾದ, ಮನಸ್ಸಿಗೆ ಹಿಡಿಸುವ ಕೆಲಸವನ್ನು ಹುಡುಕಿಕೊಂಡು ಹೋಗಬೇಕು ಇಲ್ಲವೇ ದೊರೆತ ಕೆಲಸದಲ್ಲಿ ಸಂತೋಷವನ್ನು ಹುಡುಕಬೇಕು.
ಸಂತೋಷವಿಲ್ಲದೆ ಮಾಡಿದ ಕೆಲಸದಿಂದ ಮಾಡಿದವನ ಸಮಯ ವ್ಯರ್ಥ ಹಾಗೂ ಉಳಿದವರಿಗೆ ಅಪ್ರಯೋಜಕ. ನಮ್ಮ ಕೆಲಸ ಸಣ್ಣದು, ಪ್ರಯೋಜನವಿಲ್ಲದ್ದು ಎಂದು ಗೊಣಗುವುದು ಬೇಡ. ಗೊಣಗಾಟ ಅಳುಬರುಕರ ಬದುಕು. ಮಾಡುವುದನ್ನೇ ಸೊಗಸಾಗಿ, ಉತ್ಸಾಹದಿಂದ, ಸಂತೋಷದಿಂದ ಮಾಡೋಣ.
ಆ ಕೆಲಸ ಇನ್ನೊಂದು ಹತ್ತು ಜನರಿಗೆ ಸಂತೋಷ ಕೊಡಲಿ. ಅವರಿಗೆ ದೊರೆತ ಸಂತೋಷ ನಮ್ಮ ಹೃದಯದಲ್ಲಿ ತೃಪ್ತಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತದೆ, ಬದುಕು ಧನ್ಯವಾಗುತ್ತದೆ, ಎಲ್ಲರಿಗೂ ಪ್ರಿಯವಾಗುತ್ತದೆ ಆಲ್ಲವೇ? ಯೋಚಿಸಿ, ಚಿಂತಿಸಿ, ಆಲೋಚಿಸಿ.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)
AI ಚಿತ್ರ ಬಳಸಲಾಗಿದೆ..