Site icon ಹರಿತಲೇಖನಿ

ಆಗ್ರಹಕ್ಕೆ ಮಣಿದ ಯೋಗಿ ಸರ್ಕಾರ; ಮಹಾ ಕುಂಭಮೇಳದಲ್ಲಿ ವಿವಿಐಪಿ ಪಾಸ್ ರದ್ದು..!

Cancellation of VVIP pass in Maha Kumbhamela

Cancellation of VVIP pass in Maha Kumbhamela

ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ‘ಮಹಾ ಕುಂಭಮೇಳ’ದಲ್ಲಿ (Maha Kumbhamela) ಬುಧವಾರ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಇದರ ನಡುವೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi aditya math) ಅವರೂ ಮಹಾಕುಂಭಮೇಳ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ, ಫೆ.3ರಂದು ವಸಂತ ಪಂಚಮಿ ನಡೆಯಲಿರುವುದರಿಂದ ತ್ರಿವೇಣಿ ಸಂಗಮ ಸ್ಥಳದಲ್ಲಿ ಮತ್ತೊಮ್ಮೆ ಅಮೃತ ಸ್ನಾನಕ್ಕೆ ದಿನ ನಿಗದಿಯಾಗಿದೆ.

ಫೆ.1ರಂದು 50ಕ್ಕೂ ಹೆಚ್ಚು ದೇಶಗಳ ಉಪಾಧ್ಯಕ್ಷರು ಹಾಗೂ ರಾಯಭಾರಿಗಳು ಮಹಾಕುಂಭ ಮೇಳಕ್ಕೆ ಆಗಮಿಸಲಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ದಿನ ಫೆ.5ರಂದು ಪ್ರಧಾನಿ ನರೇಂದ್ರ ಮೋದಿ (Narendra modi) ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ.

ಇದೆಲ್ಲದರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳು, ಭದ್ರತಾ ವ್ಯವಸ್ಥೆ ಹೇಗೆ ಆಗಿದೆ ಎಂಬುದನ್ನು ಮುಖ್ಯಮಂತ್ರಿ ಯೋಗಿ ಅವರೇ ಖುದ್ದಾಗಿ ಪರಿಶೀಲಿಸಿದರು.

ವಾಹನ ಸಂಚಾರ ರದ್ದು

ಕಾಲ್ತುಳಿತ ಘಟನೆ ನಂತರ ಮಹಾಕುಂಭ ಮೇಳದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಮಹಾಕುಂಭಮೇಳ ಪ್ರದೇಶವನ್ನು ‘ನೋ ವೆಹಿಕಲ್ ಝೂನ್’ ಎಂದು ರಾಜ್ಯ ಸರಕಾರ ಗುರುವಾರ ಘೋಷಿಸಿದೆ. ಅಲ್ಲದೇ, ಅತಿ ಗಣ್ಯರಿಗಾಗಿ ಮೀಸಲಿದ್ದ ವಿವಿಐಪಿ ಪಾಸ್ ವಿತರಣೆಯನ್ನೂ ರದ್ದುಗೊಳಿಸಿದೆ.

ಮೌನಿ ಅಮಾವಾಸ್ಯೆ ಹಿನ್ನೆಲೆ ಬುಧವಾರ ಸಂಜೆ 6ರವರೆಗೆ ಒಟ್ಟು 6 ಕೋಟಿ ಭಕ್ತರು ಗಂಗಾ-ಯಮುನಾ ನದಿಗಳು, ತ್ರಿವೇಣಿ ಸಂಗಮ ಸ್ಥಳದಲ್ಲಿ ಅಮೃತ ಸ್ನಾನ ಮಾಡಿದ್ದರು.

ಆ ಬಳಿಕವೂ ಭಕ್ತರು ಅಮೃತ ಸ್ನಾನ ಮಾಡುವುದು ಮುಂದುವರಿದಿತ್ತು. ಗುರುವಾರ ಮುಂಜಾನೆಯೂ ಚಳಿ ಮತ್ತು ದಟ್ಟವಾಗಿ ಕವಿದಿದ್ದ ಮಂಜನ್ನೂ ಲೆಕ್ಕಿಸದೆ ಲಕ್ಷಾಂತರ ಭಕ್ತರು ನದಿಗಿಳಿದು ಸ್ನಾನ ಮಾಡಿದರು.

ರಾಜ್ಯ ಸರಕಾರದ ಅಂಕಿ ಅಂಶ ಪ್ರಕಾರ ಗುರುವಾರ ನಸುಕಿನಿಂದ ಆರಂಭಿಸಿ ಬೆಳಗ್ಗೆ 8 ಗಂಟೆವರೆಗೆ 55.11 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದರು.

ತುರ್ತು ವಾಹನಗಳಿಗಷ್ಟೇ ಪ್ರವೇಶ: ಮಹಾ ಕುಂಭಮೇಳದ ಸುಗಮ ನಿರ್ವಹಣೆಗೆ ಪೊಲೀಸ್ ವಾಹನಗಳು, ಆಂಬ್ಯುಲೆನ್ಸ್‌ಗಳಿಗೆ, ಸಕ್ಷನ್ ಮೆಷಿನ್‌ಗಳನ್ನು ಅಳವಡಿಸಿದ ವಾಹನಗಳಿಗೆ ಮಾತ್ರವೇ ಕುಂಭ ಮೇಳ ಪ್ರದೇಶ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಉಳಿದ ವಾಹನಗಳಿಗೆ ಏನಿದ್ದರೂ ಭಕ್ತರ ನಿರ್ಗಮನ ನಂತರವಷ್ಟೇ ಪ್ರವೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version