ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ (Maha Kumbhamela stampede) ಸಂಭವಿಸಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡು ಅನೇಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆ ಲಕ್ಷಾಂತರ ಮಂದಿ ಪ್ರಯಾಗ್ ರಾಜ್ ನಲ್ಲಿ ಬೀಡುಬಿಟ್ಟಿದ್ದಾರೆ. ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಜನಜಂಗುಳಿ ಏರ್ಪಟ್ಟಿದೆ. ಮೌನಿ ಅಮಾವಾಸ್ಯೆಯ ಅಮೃತ ಪುಣ್ಯಸ್ನಾನಕ್ಕೆ ಕೋಟ್ಯಂತರ ಭಕ್ತರು ಪ್ರಯಾಗ್ ರಾಜ್ ಗೆ ಆಗಮಿಸಿರುವ ವೇಳೆಯೇ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ..
ಮೊದಲೇ ಮುನ್ನೆಚ್ಚರಿಕೆ ಕೈಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ.
ಕಾಲ್ತುಳಿತದ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಪಿಎಂ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಕಾಲ್ತುಳಿತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ತಕ್ಷಣವೇ ಅಗತ್ಯ ಕ್ರಮ ಜರುಗಿಸಬೇಕು. ಯಾವುದೇ ರೀತಿಯ ಸಹಕಾರ ನೀಡಲು ಬದ್ಧ ಎಂದು ಪಿಎಂ ಮೋದಿ ಮತ್ತು ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅಸ್ವಸ್ಥರು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.