ದೊಡ್ಡಬಳ್ಳಾಪುರ (Doddaballapura): ಯುವ ಸಂಚಲನ ಚಾರಿಟೆಬಲ್ ಟ್ರಸ್ಟ್, ಐ.ಆರ್.ಡಿ ಹಾಗೂ ಟಿ.ಡಿ.ಯು ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ಮುತ್ತಲಿನ ನೈಸರ್ಗಿಕ ಸಂಪನ್ಮೂಲ ಪರಿಚಯಿಸುವ ಹಾಗೂ ಅವುಗಳ ವೈಜ್ಞಾನಿಕ ಮಾಹಿತಿ ತಿಳಿಸುವ ‘ಚಾರಣದೊಂದಿಗೆ ಪರಿಸರ ಮಾಹಿತಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎರಡು ದಿನಗಳ ಈ ಚಾರಣದಲ್ಲಿ ಭಾಗವಹಿಸಿದ್ದ ದೊಡ್ಡಬಳ್ಳಾಪುರ ವಲಯ ಅರಣ್ಯ ಸಂರಕ್ಷಣ ಅಧಿಕಾರಿ ಕೃಷ್ಣಗೌಡ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಬೇಸಿಗೆಯಲ್ಲಿ ಕಾಡು, ಬೆಟ್ಟಗಳಿಗೆ ಬೆಂಕಿ ಬೀಳುತ್ತಿರುವುದು ಮಾನವ ನಿರ್ಮಿತವಾಗಿದೆ. ಇದರ ಬಗ್ಗೆ ಮಕ್ಕಳು ಇಂದಿನಿಂದಲೇ ಅರಿವು ಬೆಳೆಸಿಕೊಳ್ಳಬೇಕು.
ಕಾಡಿಗೆ ಬೆಂಕಿ ಬೀಳುವುದರಿಂದ ಆಗುವ ಪರಿಸರದ ಹಾನಿ ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅಪಾರ ಪ್ರಮಾಣದ ಸಸ್ಯ ಸಂಪತ್ತು, ಜೀವಸಂಕುಲ ನಾಶವಾಗುತ್ತದೆ. ಈ ಪರಿಸರ ನಷ್ಟದ ಬಗ್ಗೆ ಈಗಿನಿಂದಲೇ ತಿಳಿವಳಿಕೆ ಮೂಡಿಸಬೇಕು.
![](https://www.harithalekhani.com/wp-content/uploads/2025/01/1000943911-1024x576.webp)
ನಾಲ್ಕು ಗೋಡೆ ನಡುವೆ ಕುಳಿತು ಪರಿಸರ ಪ್ರಾಮುಖ್ಯತೆ ಪಾಠ ಹೇಳುವುದಕ್ಕಿಂತಲೂ ಚಾರಣದೊಂದಿಗೆ ಪ್ರಾಯೋಗಿಕವಾಗಿ ತಿಳಿಸುವ ಮಾಹಿತಿ ಜೀವನದುದ್ದಕ್ಕೂ ಮನಸ್ಸಿನಲ್ಲಿ ಉಳಿಯಲಿದೆ ಎಂದರು.
ಬೆಟ್ಟದ ಚಾರಣ ನುಡುವೆ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಹೂವು, ಎಲೆ, ಹುಲ್ಲು, ಕಾಯಿ ಕುರಿತು ಮಾಹಿತಿ ನೀಡಿದ ಟಿ.ಡಿ.ಯು ಉಪನ್ಯಾಸಕ ಡಾ.ಅಬ್ದುಲ್ ಕರೀಂ, ಪರಿಸರದಲ್ಲಿ ಯಾವುದೂ ವ್ಯರ್ಥವಲ್ಲ. ಯಾವುದೂ ಅನಗತ್ಯ ಎನ್ನುವುದು ಇಲ್ಲ. ಎಲ್ಲಕ್ಕೂ ಒಂದೊಂದು ರೀತಿ ಮಹತ್ವ ಇದ್ದೇ ಇರುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ನಮಗೆ ರೀತಿ ಕಾಡಿನಲ್ಲಿ ಸುತ್ತಾಡುವ ಅವಕಾಶ ಸಿಗುತ್ತಿರಲಿಲ್ಲ. ಇಂದಿನ ಮಕ್ಕಳಿಗೆ ಈ ರೀತಿಯ ಅವಕಾಶವಿದ್ದರೂ ಉತ್ತಮ ಅರಣ್ಯ ಉಳಿದಿಲ್ಲ. ಅವುಗಳನ್ನು ಉಳಿಸಿಕೊಳ್ಳಬೇಕು ಎಂದು ಪಾಠ ಹೇಳುವುದಕ್ಕಿಂತಲೂ ಈಗ ಉಳಿದಿರುವ ಅಲ್ಪಸ್ವಲ್ಪ ಕಾಡು, ಬೆಟ್ಟ ತೋರಿಸಿ ಇವುಗಳನ್ನು ಉಳಿಸಿಕೊಳ್ಳುವ ಕಡೆಗೆ ವಹಿಸಬೇಕಿರುವ ಮಹತ್ವ ತಿಳಿಸಬೇಕು ಎಂದರು.
ಎ.ಆರ್.ಡಿ ಸಂಸ್ಥೆ ಮಾನವಶಾಸ್ತ್ರಜ್ಞ ಡಾ.ರೊಮೈನ್ ಸಿಮೆನೆಲ್ ಅವರು ಹಾರ, ಆಟಿಕೆ ತಯಾರಿಕೆ, ಸಸ್ಯಗಳೊಂದಿಗೆ ಸಂಗೀತವನ್ನು ಅನ್ವೇಷಿಸುವುದು ಸಸ್ಯಗಳ ಬಣ್ಣ, ಸಸ್ಯಗಳ ಔಷಧೀಯ ಉಪಯೋಗ ಕುರಿತು ಮಕ್ಕಳಿಗೆ ‘ನಲಿ ಕಲಿ’ ಪ್ರಯೋಗದೊಂದಿಗೆ ಬೆಟ್ಟದ ತಪ್ಪಲಿನ ಕಿರುಚಲು ಕಾಡಿನ ಮಹತ್ವದ ಬಗ್ಗೆ ತಿಳಿಸಿದರು.
‘ಚಾರಣದೊಂದಿಗೆ ಪರಿಸರ ಮಾಹಿತಿ’ ಉದ್ದೇಶ ಕುರಿತು ಮಾಹಿತಿ ನೀಡಿದ ಯುವ ಸಂಚಲನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ ಮಾಹಿತಿ ನೀಡಿ, ಪರಿಸರದೊಂದಿಗೆ ಬೆರೆತಷ್ಟು ಅದರ ಮೇಲಿನ ಕಾಳಜಿ ಹೆಚ್ಚಾಗುತ್ತದೆ.
ಈ ಕಾರಣ ಶಿಕ್ಷಣದ ಭಾಗವಾಗಿ ಮಕ್ಕಳಿಗೆ ಪರಿಸರ ಶಿಕ್ಷಣ. ಕಲಿಸುವ ಉದ್ದೇಶದಿಂದ ಸಸ್ಯ ವಿಜ್ಞಾನಿಗಳೊಂದಿಗೆ, ಪರಿಸರವಾದಿಗಳೊಂದಿಗೆ ಮಕ್ಕಳನ್ನು ತೊಡಗಿಸಿ ಸಸ್ಯಗಳು, ಪರಿಸರ ಸಂರಕ್ಷಣೆ ಬಗ್ಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದರು.
‘ಚಾರಣದೊಂದಿಗೆ ಪರಿಸರ ಮಾಹಿತಿ’ಯಲ್ಲಿ ಏಟ್ರಿಯ ಸಂಸ್ಥೆಯ ಸಸ್ಯ ವಿಜ್ಞಾನಿಗಳಾದ ಆರ್.ಗಣೇಶನ್, ವೈಷ್ಣವಿ, ಟಿ.ಡಿ.ಯುನಿವರ್ಸಿಟಿ ಅಮಿತ, ಅರುಣ್, ಸುದೇಶ್ನಾ ಪ್ರಧಾನ್, ಯುವ ಸಂಚಲನ ಚಾರಿಟೆಬಲ್ ಟ್ರಸ್ಟ್‌ನ ಮುರುಳಿ, ದಿವಾಕರ್ ನಾಗ್, ನವೀನ್.
ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನರಸೀಯಪ್ಪ, ಮುಖ್ಯ ಶಿಕ್ಷಕ ಎಂ.ಸಿದ್ದರಾಮಪ್ಪ, ಸಹಶಿಕ್ಷಕರಾದ ಪುಟ್ಟಸಿದ್ದೇಗೌಡ, ಹನುಮಂತರಾಯಪ್ಪ, ನರಸಿಂಹಮೂರ್ತಿ, ಮನು, ನಾಗಮಣಿ, ಶ್ರೀನಿವಾಸ್, ಕಾವ್ಯ, ಮಾಲಾಶ್ರೀ ಇದ್ದರು.