Site icon ಹರಿತಲೇಖನಿ

Daily story| ಹರಿತಲೇಖನಿ ದಿನಕ್ಕೊಂದು ಕಥೆ: ಸುಜ್ಞಾನಿ ಎಂಬ ಪಂಡಿತ

Daily story A pandit named Sujnani

Daily story A pandit named Sujnani

Daily story: ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಆಸ್ಥಾನಕ್ಕೆ ಒಮ್ಮೆ ಸುಜ್ಞಾನಿ ಎಂಬ ಪಂಡಿತ ಬಂದ. ಅವನು ರಾಜನನ್ನು ಕುರಿತು, “ಮಹಾರಾಜರೇ, ನಿಮ್ಮ ಆಸ್ಥಾನದ ಪಂಡಿತರು ಕೇಳಿದ ಯಾವುದೇ ಪ್ರಶ್ನೆಗೆ ತೃಪ್ತಿಕರ ಉತ್ತರ ನೀಡುವೆ. ನಿಮಗೆ ಸರಿ ಎನಿಸಿದರೆ ತಕ್ಕ ಕಾಣಿಕೆ ನೀಡಿರಿ” ಎಂದು ಬೇಡಿಕೊಂಡನು.

ರಾಜನ ಒಪ್ಪಿಗೆಯ ಮೇರೆಗೆ ಸಭೆ ಕರೆಯಲಾಯಿತು. ಒಬ್ಬ ಆಸ್ಥಾನದ ಪಂಡಿತನು ಸುಜ್ಞಾನಿಯನ್ನು ಕುರಿತು. “ಸಕಲ ಮಾನವ, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಗಳು ಹಾಗೂ ಗಿಡ ಮರಗಳನ್ನು ಕಾಪಾಡುವ ಕರುಣಾಮ ತಾಯಿ ಯಾರು? ಎಂದು ಕೇಳಿದನು. ಸುಜ್ಞಾನಿ ಪಂಡಿತನು.

“ಭೂಮಿ ತಾಯಿ. ಮಾನವನಿಗೆ ಮನೆ ಕಟ್ಟಲು ಕಲ್ಲು – ಮಣ್ಣು, ಕಟ್ಟಿಗೆ ಕೊಡುವವಳು ಭೂಮಿತಾಯಿ. ಜೋಳ – ಗೋಧಿ ಮುಂತಾದ ಆಹಾರ ಧಾನ್ಯ ಬೆಳೆಯುವವಳು ಅವಳು. ಗಿಡಗಳ ಮೂಲಕ ಹಣ್ಣು, ಕಾಯಿ ನೀಡುವಳು. ಹೊಳೆ, ಕೆರೆ, ಸರೋವರ ಮೂಲಕ ನೀರು ಕೊಡುವವಳು ಭೂಮಿ ತಾಯಿಯೇ” ಎಂದು ಉತ್ತರಿಸಿದನು.

ಎರಡನೇಯ ಪಂಡಿತನು, “ಸಕಲ ಜೀವಿಗಳನ್ನು ರಕ್ಷಣೆ ಮಾಡುವ ನಿಜವಾದ ರಾಜನು ಯಾರು” ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು “ನಿಜವಾದ ರಾಜನೆಂದರೆ ಮಳೆರಾಜನೆ. ಮಳೆರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರ ಧಾನ್ಯ ಬೆಳೆಯುತ್ತಾನೆ.

ಲತೆಗಳು ಹೂ ಕೊಡುವವು. ಗಿಡಗಳು ಹಣ್ಣು ಕೊಡುವವು. ಹೊಳೆ ಕೆರೆಗಳು ನೀರು ಕೊಡುವುದು ಮಳೆ ರಾಜನ ಕೃಪೆಯಿಂದಲೇ. ಈ ರೀತಿಯಲ್ಲಿ ಸಕಲ ಜೀವಿಗಳನ್ನು ರಕ್ಷಿಸುವ ರಾಜನೆಂದರೆ ಮಳೆರಾಜನೆ” ಎಂದು ಉತ್ತರಿಸಿದನು.

ಬೆಳವಣಿಗೆ ಮಾಡುವ ಎರಡು ಮುಖ್ಯ ವಸ್ತುಗಳು ಯಾವುವು?

ಮೂರನೇಯ ಪಂಡಿತನು. “ಮಾನವ ಶರೀರವನ್ನು ಆರೋಗ್ಯಪೂರ್ಣವಾಗಿ ಬೆಳವಣಿಗೆ ಮಾಡುವ ಎರಡು ಮುಖ್ಯ ವಸ್ತುಗಳು ಯಾವುವು?” ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು.

“ನಮ್ಮ ಶಾರೀರಿಕ ಆರೋಗ್ಯ ಚೆನ್ನಾಗಿರಲು ಒಳ್ಳೆಯ ಶುಚಿಯಾದ ಆಹಾರ ಹಾಗೂ ಸ್ವಚ್ಛ ನೀರೆ ಬೇಕು. ಅನುಭವಿಗಳು ಇದನ್ನೇ “ಕೂಳು ಕುತ್ತು, ನೀರು ಪಿತ್ತು” ಅಂದಿದ್ದಾರೆ. ಅಂದರೆ ಅಶುದ್ಧ ಆಹಾರ ಹಾಗೂ ಹೊಲಸು ನೀರು ನಮ್ಮ ಶರೀರವನ್ನು ರೋಗಮಾಯ ಮಾಡುತ್ತವೆ.

ಸತ್ವಯುತ ಬಿಸಿ ಬಿಸಿ ಹಿತಮಿತವಾದ ಆಹಾರ ಹಾಗೂ ಪರಿಶುದ್ಧವಾದ ನೀರು ಆರೋಗ್ಯಪೂರ್ಣ ಬೆಳವಣಿಗೆಯ ಎರಡು ಮುಖ್ಯ ವಸ್ತುಗಳಾಗಿವೆ” ಎಂದು ಉತ್ತರಿಸಿದನು.

ನಾಲ್ಕನೇಯ ಆಸ್ಥಾನ ಪಂಡಿತನು, “ನಿಸರ್ಗದಲ್ಲಿ ಜೀವಿಸುವ ಪಕ್ಷಿ, ಪ್ರಾಣಿ, ಮನುಷ್ಯ, ಸಸ್ಯ, ಕ್ರಿಮಿ ಕಿಟಾದಿಗಳು ನಿಜವಾದ ದೇವರು ಯಾರು? ಎಂದು ಕೇಳಿದನು. ಸುಜ್ಞಾನಿಯು, “ಆಹಾರವಿಲ್ಲದೆ – ನೀರಿಲ್ಲದೆ ಯಾವು ಜೀವಿಯು ಬದುಕಲಾರದು. ಆಹಾರ ಧಾನ್ಯಗಳು ಹುಲುಸಾಗಿ ಬೆಳೆಯಲು ಸೂರ್ಯನ ಬಿಸಿಲು, ಬೆಳಕು ಅವಶ್ಯಕ.

ಸೂರ್ಯನ ಪ್ರಖರ ಕಿರಣಗಳಿಂದ ಸಮುದ್ರದ ನೀರು ಕಾಯ್ದು ಉಗಿಯಾಗಿ, ಅದ್ರವಾಗಿ ಮೇಲೆ ಹೋಗುತ್ತದೆ. ಆ ಉಗಿಗೆ ತಂಪು ತಗುಲಿದಾಗ, ಮೋಡಗಳಿಂದ ಮಳೆ ಸುರಿಯುತ್ತದೆ.

ಈ ರೀತಿ ಸುರಿದ ಮಳೆಯಿಂದ ಬೆಳೆಗಳು ಬೆಳೆದು ನಮ್ಮ ಆಹಾರವಾಗಿ ಜೀವಿಸಲು ನೆರವಾಗುತ್ತವೆ. ಮಳೆಯಿಂದ ಪಡೆದ ನೀರು ಕುಡಿಯಲು ಉಪಯೋಗವಾಗುತ್ತದೆ. ಹೀಗೆ ನಮ್ಮನ್ನು ಕಾಪಾಡುವ ನಿಜವಾದ ದೇವರೆಂದರೆ ಸೂರ್ಯದೇವೆನೆ” ಎಂದು ವಿವರಿಸಿದನು.

ಐದನೇ ಪಂಡಿತನು, “ಮನುಷ್ಯ ನಿಜವಾದ ಪ್ರಾಣ ಯಾವುದು? ಎಂದು ಕೇಳಿದನು. ಸುಜ್ಞಾನಿಯು, “ಪ್ರಾಣವೆಂದರೆ ಉಸಿರು. ಉಸಿರಾಟ ನಿಂತರೆ ಮನುಷ್ಯ ಸತ್ತಂತೆಯೇ.

ಆದ್ದರಿಂದ ಮನುಷ್ಯ ನಿಜವಾದ ಪ್ರಾಣ ಎಂದರೆ ಉಸಿರಾಟವೇ ಆಗಿದೆ. ಅನುಲೋಮ – ವಿಲೋಮ ಕ್ರಿಯೆ ಹಾಗೂ ಕಪಾಲಭಾತಿ ಮೊದಲಾದ ಪ್ರಾಣಾಯಾಮ, ಯೋಗ ಕ್ರಿಯೆಗಳು ಆರೋಗ್ಯಪೂರ್ಣ ಜೀವನಕ್ಕೆ ಪಂಚ ಪ್ರಾಣವೆಂದು ತಿಳಿಯಬೇಕು” ಎಂದು ಹೇಳಿದನು.

ರಾಜನೂ, ಆಸ್ಥಾನ ಪಂಡಿತರು ಸುಜ್ಞಾನಿ ಪಂಡಿತನ ವಾಕ್ ಚಾತುರ್ಯವನ್ನು ತುಂಬಾ ಮೆಚ್ಚಿಕೊಂಡರು. ಅವನಿಗೆ ಯೋಗ್ಯ ಕಾಣಿಕೆ ನೀಡಿ ಗೌರವಿಸಿದರು.

ಕೃಪೆ: ಸಾಮಾಜಿಕತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

Exit mobile version