ದೊಡ್ಡಬಳ್ಳಾಪುರ (Doddaballapura): ಅತಿ ದೊಡ್ಡ ಗಣತಂತ್ರ ದೇಶವಾಗಿರುವ ಭಾರತದ ಲಿಖಿತ ಸಂವಿಧಾನ ಹಲವು ತಿದ್ದುಪಡಿಗಳಾಗಿದ್ದರೂ ಸಹ ಇಂದು ಜಗತ್ತಿನಲ್ಲಿಯೇ ಶ್ರೇಷ್ಟ ಸಂವಿಧಾನವಾಗಿದೆ. ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನತೆಯನ್ನು ಸಾರುವ ನಮ್ಮ ಸಂವಿಧಾನದ ಆಶಯಗಳನ್ನು ನೆರವೇರಿಸಬೇಕಿರುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಹೇಳಿದರು.
ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯ ಹಾಗೂ ಏಕತೆ, ಸಮಗ್ರತೆಗಳನ್ನು ಅಳವಡಿಸಿಕೊಂಡು ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ರೂಪಿತವಾಗಿರುವ ಭಾರತದ ಸಂವಿಧಾನದಲ್ಲಿ ನೀಡಲಾಗಿರುವ ಮೀಸಲಾತಿಯಿಂದಾಗಿ ಇಂದು ದೇಶದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ.
18 ವರ್ಷ ತುಂಬಿದವರಿಗೆ ಮತದಾನದ ಹಕ್ಕು, ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಅಕಾರ ವಿಕೇಂದ್ರೀಕರಣ, ಪ್ರಜಾತಂತ್ರ ವ್ಯವಸ್ಥೆಯ 4ನೇ ಅಂಗವಾದ ಮಾಧ್ಯಮಗಳೂ ಸೇರಿದಂತೆ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಾಕ್ ಸ್ವಾತಂತ್ರ್ಯದ ಹಕ್ಕು ಸಂವಿಧಾನದ ಕೊಡುಗೆಯಾಗಿದೆ.
ಚುನಾವಣೆಗಳಲ್ಲಿನ ಮೀಸಲಾತಿಯಿಂದಾಗಿ ಹಿಂದುಳಿದ ಸಮುದಯದವರು ಅಕಾರಕ್ಕೆ ಬರಲು ನೆರವಾಗಿದೆ. ಜಾತ್ಯಾತೀತ ಪರಿಕಲ್ಪನೆ, ಸಮಾನತೆ ಹಾಗೂ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನದ ಆಶಯಗಳಿಗೆ ದಕ್ಕೆ ಬಾರದಂತೆ ಸಮಾನತೆ, ಬ್ರಾತೃತ್ವದ ಮೂಲಕ ಬಾಳ್ವೆ ನಡೆಸುವ ಮೂಲಕ ಕುವೆಂಪು ಅವರ ವಿಶ್ವ ಮಾನವ ಸಂದೇಶವನ್ನು ಎತ್ತಿ ಹಿಡಿಯಬೇಕಿದೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಲಕ್ಷ್ಮೀದೇವಮ್ಮ, ಉಮಾಪತಿ, ಶ್ವೇತಾ.ಡಿ.ಎಂ (ಶಿಕ್ಷಣ ಕ್ಷೇತ್ರ), ವೆಂಕಟಲಕ್ಷ್ಮಮ್ಮ (ಕೃಷಿ ಕ್ಷೇತ್ರ), ಎಲ್.ಆನಂದ್‌ಕುಮಾರ್ (ಪತ್ರಿಕೋದ್ಯಮ), ನಿಥಿನ್ ಗೌಡ(ಕ್ರೀಡೆ), ಖುಷಿಪ್ರಿಯಾ ಮತ್ತು ಸುಧಾ.ಜಿ(ಕ್ರೀಡೆ -ಯೋಗ), ಕೃಷ್ಣ.ಕೆ.ಎಸ್.(ಜನಪದ), ತೇಜಸ್ವಿನಿ.ಕೆ.ಜಿ (ಭರತ ನಾಟ್ಯ) ಅವರನ್ನು ಸನ್ಮಾನಿಸಲಾಯಿತು.
ಲೆಪ್ಟಿನೆಂಟ್ ಪ್ರವೀಣ್ ನೇತೃತ್ವದಲ್ಲಿ ಎನ್.ಸಿ.ಸಿ, ಸೇವಾದಳ, ಪೊಲೀಸ್ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಹಾಗೂ ಬ್ಯಾಂಡ್ ಸೆಟ್‌ನ್ನೊಳಗೊಂಡ ಆಕರ್ಷಕ ಪಥಸಂಚಲನ ನಡೆಯಿತು.
ಉಪವಿಭಾಧಿಗಾಕಾರಿ ಎನ್.ದುರ್ಗಾಶ್ರೀ ಗೌರವ ವಂದನೆ ಸ್ವೀಕರಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಶಾಸಕ ಧೀರಜ್ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರ.ಕೆ.ಆನಂದ್, ಉಪಾಧ್ಯಕ್ಷ ಎಂ.ಮಲ್ಲೇಶ್, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಪೌರಾಯುಕ್ತ ಕಾರ್ತಿಕ್ ಈಶ್ವರ್, ತಾಲೂಕು ಪಂಚಾಯಿತಿ ಕಾರ್‍ಯ ನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಬಿಇಓ ಸೈಯದ್ ಅನೀಸ್ ಸೇರಿದಂತೆ ನಗರಸಭೆ ಸದಸ್ಯರು ಹಾಜರಿದ್ದರು.