ಶಿಕಾರಿಪುರ: ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿವೈ ವಿಜಯೇಂದ್ರ (BY Vijayendra) ಭಾಗವಹಿಸಿ ಗಣರಾಜ್ಯೋತ್ಸವ ಪೆರೇಡ್’ನ ಗೌರವ ವಂದನೆ ಸ್ವೀಕರಿಸಿದರು.
ಊ ವೇಳೆ ಮಾತನಾಡಿದ ಅವರು, ನಮ್ಮ ಶ್ರೇಷ್ಠ ಸಂವಿಧಾನ ಕೊಡಮಾಡಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಪ್ರತಿಜ್ಞೆ ಮಾಡುವ ಮೂಲಕ, ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರಧಾನಮಂತ್ರಿಗಳ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳಿಸಲು ನಮ್ಮ ಯುವ ಸಮುದಾಯ ಜೊತೆಯಾಗಬೇಕೆಂಬ ಕರೆ ನೀಡಿದರು.
ದೇಶ ಬಹು ವರ್ಷಗಳಿಂದ ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗಳಿಗೆ ಸಮರ್ಥ ನಾಯಕತ್ವದಿಂದಾಗಿ ಪರಿಹಾರಗಳು ದೊರೆಯುತ್ತಿವೆ, ಜಾಗತಿಕ ಮಟ್ಟದಲ್ಲಿ ‘ನಂ 1’ ಸ್ಥಾನವನ್ನು ಪಡೆಯುವ ಮೂಲಕ ಸಾಗುತ್ತಿರುವ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ತಹಶಿಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಪುರಸಭೆ ಅಧ್ಯಕ್ಷೆ ಶೈಲಜಾ ಯೋಗೀಶ್ ಮಡ್ಡಿ, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ಮುಖಂಡರು ಇದರು.