Site icon ಹರಿತಲೇಖನಿ

BJP ಬಣ ಬಡಿದಾಟ: ವಿಜಯೇಂದ್ರ ವಿರುದ್ಧ ಸದಾನಂದ ಗೌಡ ಬೇಸರ

BJP faction clash: Sadanand Gowda upset against Vijayendra

BJP faction clash: Sadanand Gowda upset against Vijayendra

ಬೆಂಗಳೂರು (Sadanand Gowda): ರಾಜ್ಯ ಬಿಜೆಪಿಯಲ್ಲಿನ (BJP) ಬಣಗಳ ಬಡಿದಾಟ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಂಡುಬರುತ್ತಿಲ್ಲ.

ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ & ಟೀಂ. ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಅಸಮಾಧಾನ ಹೊರಹಾಕಿರುವ ಬೆನ್ನಲ್ಲೇ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರೂ ಕೂಡ ಕೇಂದ್ರದ ವರಿಷ್ಠರು ಹಾಗೂ ವಿಜಯೇಂದ್ರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಪಕ್ಷ ನಾಯಕರ ವಿರುದ್ಧವೇ ಅನೇಕ ಮುಖಂಡರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದು, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ.

ಈ ನಡುವೆ ಬಿಜೆಪಿಯ ಇಂತಾ ಸ್ಥಿತಿಗೆ ಕೋರ್ ಕಮಿಟಿ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ (Sadanand Gowda) ಹೇಳಿದ್ದಾರೆ. ಇದೇ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಸಮಾಧಾನ ಎದ್ದಾಗಲೇ ಇದರ ಬಗ್ಗೆ ಗಮನಹರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಾಗಿತ್ತು. ಕರ್ನಾಟಕ ಬಿಜೆಪಿಯ ಈ ಸ್ಥಿತಿಗೆ ಕೋರ್‌ಕಮಿಟಿಯೂ ಕಾರಣ ಎಂದು ಡಿವಿ ಸದಾನಂದ ಗೌಡ ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಣೆ ಮಾಡುತ್ತಿಲ್ಲ. ಅವರು ಪಕ್ಷದಲ್ಲಿನ ಅತೃಪ್ತ ನಾಯಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

ಸಹಮತ ಇರದಿದ್ದರೆ ಪಕ್ಷದಲ್ಲಿ ಚುನಾವಣೆ ನಡೆಯುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಬೇಡ ಅಂದರೆ ಅವಿರೋಧ ಆಯ್ಕೆ ಆಗುತ್ತದೆ ಎಂದು ಹೇಳಿದ್ದು, ಚುನಾವಣೆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪರೋಕ್ಷವಾಗಿ ಅಭಿಪ್ರಾಯಪಟ್ಟರು.

ನಮ್ಮ ಪಕ್ಷ ಶಿಸ್ತಿನ ಪಾರ್ಟಿ ಎನ್ನುತ್ತಾರೆ. ಆದರೆ ಕೇಂದ್ರದ ವರಿಷ್ಠರಿಂದ ಯಾವ ಕ್ರಮಗಳು ಆಗುತ್ತಿಲ್ಲ. ಅತ್ತ ವಿಜಯೇಂದ್ರ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಫೇಲ್ ಆಗಿದ್ದಾರೆ. ಪಕ್ಷ ಸಂಘಟನೆಗೆ ಪೆಟ್ಟಾಗಿದೆ.

ರಾಜ್ಯದಲ್ಲಿ 75 ಲಕ್ಷ ಸದಸ್ಯರ ನೊಂದಣಿಯಾಗಿದೆ. ಆದರೆ ಈ ಸದಸ್ಯತ್ವ ಪಡೆದಿರುವುದು ಮೋದಿ ಅವರನ್ನು ಮೆಚ್ಚಿ ಆಗಿರುವಂತದ್ದೇ ಹೊರತು, ರಾಜ್ಯ ಬಿಜೆಪಿ ಚೆನ್ನಾಗಿದೆ ಎಂದು ನೊಂದಣಿ ಆಗಿಲ್ಲ.

ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಾಗಲೇ ಇದರ ಬಗ್ಗೆ ಗಮನಹರಿಸಿ ಸರಿ ಮಾಡಬೇಕಾಗಿತ್ತು. ಆದರೆ ಅದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಮ್ಮ ಮನೆಯಲ್ಲಿ ನಡೆದ ಸಭೆ, ಕೋರ್ ಕಮಿಟಿ ಸಭೆಯ ಹೊರತು ಬಣದ ಸಭೆಯಲ್ಲ. ಈ ಸಭೆಯಲ್ಲಿ ಪಕ್ಷದಲ್ಲಿನ ಅವ್ಯವಸ್ಥೆ ಕುರಿತು ಚರ್ಚೆ ನಡೆಸಲಾಗಿದ್ದು, ಪಕ್ಷವನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಕೆಲ ಮಾಹಿತಿ ಸಂಗ್ರಹಿಸಿ ಮಾಹಿತಿ ನೀಡಲಾಗುವುದು.

Exit mobile version