ದೊಡ್ಡಬಳ್ಳಾಪುರ: ರಾಜ್ಯದ ಬೀದರ್ ಹಾಗೂ ಮಂಗಳೂರಿನಲ್ಲಿ ಸಂಭವಿಸಿದ ATM ಹಣ ದರೋಡೆ, ಬ್ಯಾಂಕ್ ದರೋಡೆ ಪ್ರಕರಣಗಳ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಜನವರಿ 16ರಂದು ಗುರುವಾರ ಬೀದರ್‌ನ ಎಸ್‌ಬಿಐ ಬ್ಯಾಂಕ್ ಬಳಿ ಇದ್ದ ಎಟಿಎಂಗೆ ಹಣ ತುಂಬಲು ಬಂದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣದ ಬಾಕ್ಸ್‌ನೊಂದಿಗೆ ಇಬ್ಬರು ಕಳ್ಳರು ಎಸ್ಕೇಪ್ ಆಗಿದ್ದರು.
ಗುಂಡಿನ ದಾಳಿಯಲ್ಲಿ ಓರ್ವ ಬ್ಯಾಂಕ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರವಾಗಿ ಕೈಗೊಳ್ಳುತ್ತಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಸಭೆ, ಬ್ಯಾಂಕ್, ಎಟಿಎಂ ಭದ್ರತೆ ಪರಿಶೀಲನೆ, ವಾಹನಗಳ ತಪಾಸಣೆ ಸೇರಿದಂತೆ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಹಾಗೂ ಸಿಬ್ಬಂದಿಗಳು ಕಳೆದ ರಾತ್ರಿ ಬ್ಯಾಂಕ್ & ಎಟಿಎಂ ಭದ್ರತೆ, ಸಿಸಿ ಕ್ಯಾಮೆರಾ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ನಂತರ ಸೆಕ್ಯೂರಿಟಿ ಗಾರ್ಡಗಳಿಗೆ ಹೆಚ್ಚುತ್ತಿರುವ ಬ್ಯಾಂಕ್ & ಎಟಿಎಂ ದರೋಡೆಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕರೆ ಮಾಡಿ ತಿಳಿಸುವಂತೆ ಸೂಚಿಸಿರುತ್ತಾರೆ.
ಅಲ್ಲದೆ ಇಂದು ಬೆಳ್ಳಂಬೆಳಗ್ಗೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರ ಕೆರೆಯ ಏರಿ ಮೇಲೆ ವಾಯುವಿಹಾರಕ್ಕೆ ಬಂದಂತ ಹಿರಿಯ ನಾಗರೀಕರು ಮತ್ತು ಮಹಿಳೆಯರಿಗೆ ಹೆಚ್ಚುತ್ತಿರುವ ಸರಗಳ್ಳತನ ಮುಂಜಾಗ್ರತೆ ವಹಿಸಲು ASI ಕೃಷ್ಣಮೂರ್ತಿ ಸಲಹೆ ನೀಡಿದರು.
ಇದೇ ವೇಳೆ ಬ್ಯಾಂಕುಗಳಿಗೆ ವ್ಯವಹರಿಸಲು ಹೋದಾಗ ಮನ ಬೇರೆಡೆ ಸೆಳೆದು ಹಣದೋಚುವ ಗ್ಯಾಂಗ್ ಳ ಮತ್ತು ಎಟಿಎಂ ಗಳಲ್ಲಿ ಹಣ ವಿತ್ ಡ್ರಾ ಮಾಡಲು ಬಾರದೆ ಇದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳಿಗೆ ಎಟಿಎಂ ಕಾರ್ಡ್ ನೀಡದೆ, ಎಟಿಎಂ ಗಳಲ್ಲಿ ಇರುವ ಸೆಕ್ಯೂರಿಟಿ ಗಾರ್ಡ್ ಗಳ ಕೈಯಿಂದ ಹಣ ವಿತ್ ಡ್ರಾ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಮುಂದುವರಿದು ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಅಥವಾ 112 ಗೆ ಕರೆ ಮಾಡಬೇಕೆಂದು ನಗರ ಠಾಣೆಯ ASI ಕೃಷ್ಣಮೂರ್ತಿ ಅರಿವು ಮೂಡಿಸಿದರು.