ದೊಡ್ಡಬಳ್ಳಾಪುರ (Doddaballapura): ವಿದ್ಯುತ್ ಸರಬರಾಜು ಕಡಿತದಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ಕುಡಿಯುವ ನೀರು ಎರಡಕ್ಕು ಸಹ ಜನರು ಪರದಾಡುವಂತಾಗಿರುವುದನ್ನು ಖಂಡಿಸಿ ಮಂಗಳವಾರ ರೈತರು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಈಗಷ್ಟೇ ಬೇಸಿಗೆ ಪ್ರಾರಂಭವಾಗುತ್ತಿರುವ ದಿನಗಳಲ್ಲೇ ಸಮಯ ನಿಗದಿ ಇಲ್ಲದೆ, ಸರ್ಕಾರದ ಸೂಚನೆ ಇಲ್ಲದೆ ವಿದ್ಯುತ್ ಕಡಿತ ಪ್ರಾರಂಭವಾಗಿದೆ.
ವಿದ್ಯುತ್ ಕಡಿತ ಮಾಡುತ್ತಿರುವ ಬಗ್ಗೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಪಷನೆ ನೀಡಬೇಕು. ಇಡೀ ರಾಜ್ಯದ ಯಾವ ತಾಲ್ಲೂಕಿನಲ್ಲೂ ಇಲ್ಲದ ವಿದ್ಯುತ್ ಕಡಿತವನ್ನು ನಮ್ಮ ತಾಲ್ಲೂಕಿನಲ್ಲಿ ಮಾತ್ರ ಮಾಡುತ್ತಿರುವುದು ಖಂಡನೀಯ. ಈ ತಾರತಮ್ಯ ನೀತಿ ಸರಿಯಾಗದೇ ಇದ್ದರೆ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನ ನಿರತ ರೈತರಿಗೆ ಮಾಹಿತಿ ನೀಡಿದ ಬೆಸ್ಕಾಂ ನಗರ ಉಪವಿಭಾಗದ ಕಾರ್ಯಾಪಾಲಕ ಎಂಜಿನಿಯರ್ ಎಚ್.ಪಿ. ವಿನಯಕುಮಾರ್, ನಗರದ ‘ಡಿ’ ಕ್ರಾಸ್ ಸಮೀಪ ಇರುವ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ವಿದ್ಯುತ್ ಪರಿವರ್ತಕ ಒಂದು ವಾರದ ಹಿಂದೆ ಹಾನಿಯಾಗಿದೆ.
ಇದರ ಬದಲಾವಣೆ ಕಾರ್ಯ ನಡೆಯುತ್ತಿದೆ. ಎರಡು ದಿನಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಲಿದೆ ಎಂದು ಮಾಹಿತಿ ನೀಡಿದರು.