ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ (KSRTC) ಬಸ್ ಪಲ್ಟಿ ಹೊಡೆದಿರುವ ಘಟನೆ (accident) ಮದ್ದೂರಿನ ರುದ್ರಾಕ್ಷಿಪುರ ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಚಾಮರಾಜನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ರುದ್ರಾಕ್ಷಿಪುರ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿತ್ತು.
ಈ ವೇಳೆ ಕಂಡಕ್ಟರ್ ನೀಡಿದ ಟಿಫನ್ ಬಾಕ್ಸ್ ಚಾಲಕ ಪಡೆಯುವ ವೇಳೆ ನಿಯಂತ್ರಣ ತಪ್ಪಿದ್ದು, ಅದೇ ವೇಗದಲ್ಲೇ ಬಸ್ ಡಿವೈಡರ್ ಹತ್ತಿ ಇನ್ನೊಂದು ಬದಿಯ ರಸ್ತೆಗೆ ಹೋಗಿ ಪಲ್ಟಿಯಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಘಟನೆ ವೇಳೆ ಎದುರಿಗೆ ಯಾವುದೇ ವಾಹನ ಬಾರದ ಕಾರಣ ದೊಡ್ಡ ಪ್ರಮಾದವೊಂದು ತಪ್ಪಿದೆ.
ಘಟನೆಯಲ್ಲಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದೇ ಮಾರ್ಗದಲ್ಲಿ ಬರುತ್ತಿದ್ದ ಸಚಿವ ಚಲುವರಾಯಸ್ವಾಮಿ ಅವರು ಕಾರು ನಿಲ್ಲಿಸಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ದೊರುಕುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.