ದೊಡ್ಡಬಳ್ಳಾಪುರ: ವಿದ್ಯೆಯ ಜೊತೆ ಕೌಶಲ್ಯ ಕೂಡ ಅಗತ್ಯವಾಗಿದ್ದು, ಕೌಶಲ್ಯವಿಲ್ಲದ ಶಿಕ್ಷಣದಿಂದ ಯಾವುದೇ ಪ್ರಯೋಜನವಿಲ್ಲವೆಂದು ಸಂಸದ ಡಾ.ಕೆ.ಸುಧಾಕರ್ (Dr K Sudhakar) ಅಭಿಪ್ರಾಯಪಟ್ಟರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬಮುಲ್ ಟ್ರಸ್ಟ್, ದೊಡ್ಡಬಳ್ಳಾಪುರ ಶಿಬಿರ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ದೊಡ್ಡಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸಂಘದ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ಹುದ್ದೆಗೆ ಅನುಗುಣವಾಗಿ ಕೌಶಲ್ಯವನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ತರಬೇತಿಯನ್ನು ನೀಡಬೇಕಿದೆ.. ಈ ಕುರಿತು ಸಂಬಂಧಿಸಿದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಾಗಿದೆ.
ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ನಿರುದ್ಯೋಗಿಗಳಿಗೆ ಕೈಗಾರಿಕೆಗಳ ಉದ್ದಿಮೆದಾರರಿಂದ ವಿಶೇಷ ತರಬೇತಿ ನೀಡಲು ಕ್ರಮವಹಿಸಲಾಗುವುದು. ಬಮೂಲ್ ಸಂಸ್ಥೆ ಕೂಡ ಉದ್ದಿಮೆಯೊಂದಿಗೆ ಕೈಜೋಡಿಸಿದರೆ ಉಪಯೊಗವಾಗಲಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸಣ್ಣಪುಟ್ಟ ಗುರಿಗಳನ್ನು ಕಾಣದೆ, ದೊಡ್ಡಮಟ್ಟದ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಸಿದ್ದತೆ ನಡೆಸಬೇಕಿದೆ. ನಾವು ರೈತರ ಮಕ್ಕಳಾಗಿ ಇಲ್ಲಿವರೆಗೂ ಬಂದಿದ್ದೇವೆ ಎಂದರೆ ನಿಮಗೂ ಸಾಧ್ಯವಿದೆ ಎಂಬುದನ್ನು ಮನಗಾಣಬೇಕಿದೆ.
ಬಮೂಲ್ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸುತ್ತಿರುವುದು ಪ್ರಶಂಸನೀಯ ಕಾರ್ಯ. ಬಿಸಿ ಆನಂದ್ ಕುಮಾರ್ ಅವರಂತಹ ಒಳ್ಳೆಯ ಪ್ರತಿನಿಧಿಗಳು, ಗ್ರಾಮೀಣ ಪ್ರದೇಶದ ರೈತರ ಜೊತೆಯಲ್ಲಿಯೇ ಇದ್ದು, ಅವರ ಬದುಕನ್ನು ಕಟ್ಟಿಕೊಡುವಂತಹ ಕೆಲಸ ಮಾಡುವ ಇಂತಹ ಪ್ರತಿನಿಧಿಗಳನ್ನು ಉಳಿಸಿ, ಸಹಕಾರ ನೀಡಬೇಕಾಗುತ್ತದೆ.
ಯಾರು ನಿಮ್ಮ ಜೊತೆಯಲ್ಲಿ ಹಗಲಿರುಳು ಶ್ರೇಯೋಭಿಲಾಷಿಯಾಗಿ ಕೆಲಸ ಮಾಡ್ತಾರೆ ಇಂತಹ ಪ್ರತಿನಿಧಿಗಳು ಉಳಿಸಬೇಕಾಗುತ್ತದೆ. ಬಹುಶಃ ಮುಂದಿನ ದಿನಗಳಲ್ಲಿ ಬಮೂಲ್ ಚುನಾವಣೆ ನಡೆಯಲಿದೆ.
ರಾಜ್ಯ ಸರ್ಕಾರದ ವಿರುದ್ಧ ಬೇಸರ
ರಾಜ್ಯಾದ್ಯಂತ ಸಹಕಾರ ಕ್ಷೇತ್ರಕ್ಕೆ, ಅದರಲ್ಲಿಯೂ ಕೆಎಂಎಫ್ಗೆ ಚುನಾವಣೆ ನಡೆಯಬೇಕಿತ್ತು. ಆದರೆ ಪ್ರಜಾಪ್ರಭುತ್ವದ ಬಗ್ಗೆ ಪದೇ ಪದೇ ಮಾತಾಡುವವರು, ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಪದೇ ಪದೇ ಹೇಳುವವರು ಅಂತಹ ಸರ್ಕಾರದಲ್ಲಿ ಒಂದು ವರ್ಷ ಮೀರಿದರು, ಇನ್ನೂ ಇರ್ತಕ್ಕಂತವರೇ ಅಧಿಕಾರದಲ್ಲಿ ಮುಂದುವರಿಸುವುದು ಸರಿಯಲ್ಲ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದರು.
ಬಮೂಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ, ಯುವ ಸಮುದಾಯ ತಂದೆತಾಯಂದಿರ ವೃದ್ಯಾಪ್ಯದಲ್ಲಿ ನಾನಿದ್ದೀನಿ ಎಂದು ಹೆಗಲಾಗಬೇಕಿದೆ. ತಂದೆತಾಯಂದಿರುವ ಮಕ್ಕಳ ಸಂತೀಷಕ್ಕಾಗಿ, ಅವರ ಜೀವನ ರೂಪಿಸಲು ಅವರ ಸಂತೋಷವನ್ನು ಬದಿಗಿಟ್ಟು ಶ್ರಮಿಸುತ್ತಾರೆ. ಆದರೆ ಕಾಲೇಜು ಮೆಟ್ಟಿಲೇರುವ ಯುವ ಸಮುದಾಯ ಪ್ರೀತಿ ಪ್ರೇಮದ ಹೆಸರಲ್ಲಿ ಹೆತ್ತವರ ಕಣ್ಣೀರು ಹಾಕಿಸುತ್ತಿದ್ದಾರೆ.
ಯುವಕರಾಗಲಿ, ಯುವತಿಯರಾಗಲಿ ನಾ ಕೇಳಿಕೊಳ್ಳುವುದು ಒಂದೇ, ನೀವು 100ಕ್ಕೆ 100 ಮಾರ್ಕ್ಸ್ ತಗಿಯದಿದ್ದರು ಪರ್ವಾಗಿಲ್ಲ.. ಆದರೆ ಹೆತ್ತವರ ಕಣ್ಣೀರು ಹಾಕಿಸಬೇಡಿ.
ಎಸ್‌ಎಲ್‌ಸಿ, ಪಿಯುಸಿ ವ್ಯಾಸಂಗ ಮಾಡ್ತಾ ಇರುವ ಮಕ್ಕಳು, 10 ವರ್ಷಗಳ ಕಾಲ ಕಷ್ಟಪಟ್ಟು ಓದಿದರೆ ಮುಂದಿನ 70 ವರ್ಷ ಕಾಲ್ ಮೇಲೆ ಕಾಲು ಹಾಕಿಕೊಂಡು ನೆಮ್ಮದಿಯಿಂದ ಇರ್ತಿರ ಎಂಬುದನ್ನು ಅರಿತುಕೊಳ್ಳಬೇಕಿದೆ. ಇಲ್ಲವಾದರೆ ಗಾರ್ಮೆಂಟ್ಸಲ್ ಕೆಲಸ ಮಾಡಬೇಕಾಗುತ್ತದೆ ಎಂಬ ಅರಿವಿರಲಿ.
ಹೆತ್ತವರಾದ ನಾವುಗಳು ಮಕ್ಕಳನ್ನು ಕಾಲೇಜು ಮೆಟ್ಟಿಲು ಹತ್ತಿಸಿದರೆ, ಮಕ್ಕಳು ಹೆತ್ತವರನ್ನು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಸುತ್ತಿದ್ದಾರೆ.. ದಯವಿಟ್ಟು ರೈತರ ಮಕ್ಕಳು ತಪ್ಪುದಾರಿಗೆ ಸಾಗದೆ ದೇಶವನ್ನು ಕಟ್ಟುವ ಕಾರ್ಯ ಮಾಡಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ರಾಜ್ ಕುಮಾರ್, ಉಪಾಧ್ಯಕ್ಷ ಮಂಜುನಾಥ್, ಶಾಸಕ ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಮುಖಂಡರಾದ ಕುರುಬಗೆರೆ ನರಸಿಂಹಯ್ಯ, ಬಿಸಿ ನಾರಾಯಣಸ್ವಾಮಿ,
ನ್ಯಾಯವಾದಿ ಅಂಜನಗೌಡ, ರಂಗಪ್ಪ, ನರಸಿಂಹಮೂರ್ತಿ, ಟಿ.ವಿ.ಲಕ್ಷ್ಮೀನಾರಾಯಣ್ ಸೇರಿದಂತೆ ಅನೇಕ ಮುಖಂಡರಿದ್ದರು.