ಪಾವಗಡ: ಪಾವಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೈಥಿಲಿ (19 ವರ್ಷ) ಎಂಬ ವಿದ್ಯಾರ್ಥಿನಿ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ಪಟ್ಟಣದ ಚಳ್ಳಕೆರೆ ಕ್ರಾಸ್‌ನಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ನಿನ್ನೆ ಮಧ್ಯಾಹ್ನ ಕಾಲೇಜಿನ ತರಗತಿ ಮುಗಿಸಿ ಪಟ್ಟಣದ ಕಡೆ ಬರುತ್ತಿದ್ದ ವೇಳೆ ಚಳ್ಳಕೆರೆ ಕ್ರಾಸ್ ಬಳಿ ಸುಸ್ತಾಗಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಕಳವಳ
ಈ ಕುರಿತು ಕಳವಳ ವ್ಯಕ್ತಪಡಿಸಿರುವ ಹಿರಿಯ ಪತ್ರಕರ್ತ ಪ್ರಭುದೇವ ಶಾಸ್ತ್ರೀಮಠ, ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತ ಆಗಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಪಾವಗಡ ಪಟ್ಟಣದ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಮೈಥಿಲಿ ಶನಿವಾರ ತರಗತಿ ಮುಗಿಸಿ ಪಟ್ಟಣದ ಬಸ್ ನಿಲ್ದಾಣಕ್ಕೆ ಬರುವಾಗ ಸುಸ್ತಾಗಿ ಕೆಳಗೆ ಬಿದ್ದಿದ್ದಾಳೆ.
ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆ. ಇಂಥ ಹಲವಾರು ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ.
ಇದು ಕೋವಿಡ್ ಲಸಿಕೆ ಪರಿಣಾಮ ಅಂತ ಕೆಲವರ ಅಭಿಪ್ರಾಯ. ಅದರಿಂದ ಹೀಗೆಲ್ಲ ಆಗುವುದೇ ಇಲ್ಲ ಅಂತ ಇನ್ನು ಕೆಲವರ ಅಭಿಮತ. ಸರಿ, ಯಾತಕ್ಕೋಸ್ಕರ ಆಗುತ್ತಿದೆ ಅಂತ ನಿಖರವಾಗಿ ತಿಳಿದುಕೊಳ್ಳಲು ಒಂದು ಅಧಿಕೃತ ಅಧ್ಯಯನವಾದರೂ ಆಗಬೇಕಲ್ಲವೇ? ಎಂದಿದ್ದಾರೆ.