Site icon ಹರಿತಲೇಖನಿ

Doddaballapura: ಗಣರಾಜ್ಯೋತ್ಸವಕ್ಕೆ ಶಾಲಾ ಮಕ್ಕಳ ಗೈರು..!

Doddaballapura: School children absent for Republic Day..!

Doddaballapura: School children absent for Republic Day..!

ದೊಡ್ಡಬಳ್ಳಾಪುರ (Doddaballapura): ಚಿಕ್ಕತುಮಕೂರು ಸೇರಿದಂತೆ ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಜ.26 ರಂದು ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸದೆ ನಮ್ಮ ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದು ಚಿಕ್ಕತುಮಕೂರು ಗ್ರಾಮದ ನಿವಾಸಿಗಳಾದ ಮಾಲ, ತ್ರಿವೇಣಿ ಹೇಳಿದರು.

ಅವರು ಭಾನುವಾರ ಚಿಕ್ಕತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿ ವ್ಯಾಪ್ತಿಯ ಒಳಚರಂಡಿ ನೀರು ಹಾಗೂ ಕೈಗಾರಿಕಾ ಪ್ರದೇಶದಿಂದ ಶುದ್ದೀಕರಿಸದೆ ನಮ್ಮೂರಿನ ಕೆರೆಗಳಿಗೆ ಹರಿದು ಬಿಡಲಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತವಾಗಿ ಕುಡಿಯಲು ಸಹ ಯೋಗ್ಯ ನೀರು ದೊರೆಯುತ್ತಿಲ್ಲ.

ಕೆರೆ ಅಂಚಿನಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ನಡೆಸುವ ಹಿಂದುಳಿದ ವರ್ಗಕ್ಕೆ ಸೇರಿದವರು. ಪ್ರತಿ ಮನೆಯಲ್ಲೂ ಚರ್ಮ ರೋಗಗಳಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ.

ಹಿರಿಯರು ಉಸಿರಾಟದ ತೊಂದರೆ, ಕೈ, ಕಾಲುಗಳ ನೋವುಗಳಿಂದ ಬಳಲುತ್ತಿದ್ದಾರೆ. ನಮಗೆ ಶುದ್ದ ಕುಡಿಯುವ ನೀರು ಕೊಡುವಂತೆ ಹತ್ತು ವರ್ಷಗಳಿಂದಲು ಹೋರಾಟ ನಡೆಸುತ್ತಲೇ ಬರುತ್ತಿದ್ದರು ಸಮಸ್ಯೆ ಮಾತ್ರ ಉಲ್ಬಣವಾಗುತ್ತಲೇ ಇದೆ.

ವಾಸ್ತವ ಪರಿಸ್ಥಿತಿ ಹಿಗಿರುವಾಗ ಗಣರಾಜ್ಯೋತ್ಸವ ಆಚರಣೆ ಮಾಡುವುದರಲ್ಲಿ ಅರ್ಥವಿದೆಯೆ ಎಂದು ಪ್ರಶ್ನಿಸಿದರು.

ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಮುಖಂಡರಾದ ರಮೇಶ್, ಸತೀಶ್ ಮಾತನಾಡಿ, ಜ.26 ರಂದು ಎರಡೂ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ಸಮಿತಿಯ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಪಡೆಯಲಾಗಿದೆ.

ಸಹಿ ಸಂಗ್ರಹ ಮಾಡುವ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸರಿಗೆ ಸಲ್ಲಿಸಲಾಗಿದೆ. ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು.

ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ಸಭೆ ನಡೆಸಿ ನೀಡಲಾಗಿದ್ದ ಯಾವುದೇ ಭರವಸೆಯು ಇದುವರೆಗೂ ಈಡೇರಿಲ್ಲ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಯ ಕಚೇರಿಯನ್ನು ನಗರಕ್ಕೆ ಸ್ಥಳಾಂತರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉರುಳು ಸೇವೆ ಮಾಡಿದರು ಇದುವರೆಗೂ ಸ್ಥಳಾಂತರ ಆಗಿಲ್ಲ.

ಇಂತಹ ಕನಿಷ್ಠ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲೂ ಸಹ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿಫಲವಾಗಿದೆ. ಈ ಎಲ್ಲಾ ಕಾರಣದಿಂದ ಗಣರಾಜ್ಯೋತ್ಸವ ದಿನದಂದು ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಗಂಗಮ್ಮ, ಗ್ರಾಮಸ್ಥರಾದ ನಾರಾಯಣ, ಮಂಜುನಾಥ್, ಮುನಕೃಷ್ಣ ಇದ್ದರು.

Exit mobile version